Share News

ಭಾರತದಲ್ಲಿ ಟಿ ಟ್ವೆಂಟಿ ಹಬ್ಬ ಜೋರಾಗಿದೆ. ಸಧ್ಯ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ನಾಲ್ಕರ ಘಟ್ಟ ತಲುಪಿದೆ. ತಂಡದ ಮನೆಯಂಗಳದ ಮ್ಯಾಚುಗಳು ಮುಗಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ತಮ್ಮ ಆಟ ಶುರುಮಾಡಿದ್ದಾರೆ.

ಬೆಂಗಳೂರು ನಗರದಾದ್ಯಂತ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ ವೇಳೆ ಸಕ್ರಿಯವಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಭೇದಿಸಲು ಸಿಸಿಬಿ ಪೊಲೀಸರು ಸರಣಿ ದಾಳಿಗಳನ್ನು ನಡೆಸಿದ್ದಾರೆ. ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಭಾಗಿಯಾಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಸಿಸಿಬಿ ಪೊಲೀಸ್ ಠಾಣೆಯಲ್ಲೇ ನೇರವಾಗಿ 9 ಪ್ರಕರಣಗಳು ದಾಖಲಾಗಿದ್ದು, ಪ್ರಮುಖ 4 ಪ್ರಕರಣಗಳಲ್ಲಿ ಸಿಕ್ಕಿಬಿದ್ದ 5 ಜನ ಮುಖ್ಯ ಆರೋಪಿಗಳಿಂದ 1,06,433 ರೂ. ನಗದು ಹಣ, ಬೆಟ್ಟಿಂಗ್‌ಗೆ ಬಳಸುತ್ತಿದ್ದ 1,10,000 ರೂ. ಮೌಲ್ಯದ 7 ಮೊಬೈಲ್ ಫೋನ್‌ಗಳು ಹಾಗೂ ಬರೋಬ್ಬರಿ 13,37,36,911 ರೂ. ಮೌಲ್ಯದ ಚಿಪ್ಸ್ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಳ್ಳಲಾದ ಈ ಎಲ್ಲಾ ವಸ್ತುಗಳ ಒಟ್ಟು ಮೊತ್ತ 13,39,53,344 ರೂ. ಆಗಿರುತ್ತದೆ.

ಈ ಬೃಹತ್ ಬೆಟ್ಟಿಂಗ್ ದಂಧೆಯನ್ನು ಯಶಸ್ವಿಯಾಗಿ ಭೇದಿಸಿದ ಕೀರ್ತಿ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಸಲ್ಲುತ್ತದೆ. ಈ ಇಡೀ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಗೌರವಾನ್ವಿತ ಪೊಲೀಸ್ ಆಯುಕ್ತರಾದ ಶ್ರೀ. ಸೀಮಾಂತ್ ಕುಮಾರ್ ಸಿಂಗ್ ರವರ ಸಮರ್ಥ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ನೇರ ನೇತೃತ್ವವನ್ನು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಅಜಯ್ ಹಿಲೋರಿ ಹಾಗೂ ಅಪರಾಧ-1 ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಶ್ರೀಹರಿಬಾಬು ಬಿ ಎಲ್ ಅವರು ವಹಿಸಿದ್ದರು. ಇವರ ನೇರ ಉಸ್ತುವಾರಿಯಲ್ಲಿ, ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರು , ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇತರೆ ದಕ್ಷ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಅತ್ಯಂತ ಜಾಣ್ಮೆಯಿಂದ ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

 


Share News