Share News

ಹಿರಿಯೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಅನುಷ್ಠಾನದ ವೈಫಲ್ಯ ಎದ್ದು ಕಾಣುತ್ತಿದೆ. ಹಿರಿಯೂರು ಟೌನ್‌ನ ವೇದಾವತಿ ನಗರದ 3ನೇ ವಾರ್ಡ್‌ನಲ್ಲಿರುವ ‘ಡಾಗ್ ಸರ್ಕಲ್’ ಭಾಗದಲ್ಲಿನ ಅವ್ಯವಸ್ಥೆಯೇ ಇದಕ್ಕೆ ಸಾಕ್ಷಿ ಎಂದು ನಾಗರೀಕ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಎಸ್.ವಿ. ರಂಗನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 23 ರಂದು ವಾರ್ಡ್‌ಗೆ ಬಂದ ಕಸದ ಗಾಡಿಯಲ್ಲಿ ಕೇವಲ ಚಾಲಕ ಮಾತ್ರ ಇದ್ದು, ಯಾವುದೇ ಸಹಾಯಕ ಸಿಬ್ಬಂದಿ ಇರಲಿಲ್ಲ. ಇದರಿಂದಾಗಿ ಮನೆಗಳಿಂದ ಕಸ ತಂದ ಮಹಿಳೆಯರು ಮತ್ತು ಮಕ್ಕಳು ತಾವೇ ಗಾಡಿಯ ಎತ್ತರಕ್ಕೆ ಕಸವನ್ನು ಎಸೆಯಲು ಹರಸಾಹಸ ಪಡುವಂತಾಯಿತು. ಕಸದ ಗಾಡಿಗೆ ಕಸ ಹಾಕಲು ನಾಗರಿಕರು ಪಡುತ್ತಿರುವ ಸಂಕಷ್ಟದ ದೃಶ್ಯಗಳು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿವೆ ಎಂದು ರಂಗನಾಥ್ ದೂರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಕುರಿತು ನಿಗಾ ವಹಿಸುವ ಅಥವಾ ಮೇಲ್ವಿಚಾರಣೆ ಮಾಡುವ ಸಿಬ್ಬಂದಿಗಳು ಯಾರೂ ವಾರ್ಡ್ ಕಡೆಗೆ ಮುಖ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ, ಚರಂಡಿಗಳ ಸ್ವಚ್ಛತೆಯೂ ಕಾಲಕಾಲಕ್ಕೆ ನಡೆಯುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮದ ಉದ್ದೇಶ ಹೇಗೆ ಈಡೇರುತ್ತದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

“ಡಾಗ್ ಸರ್ಕಲ್” ಭಾಗದಲ್ಲಿ ಸಾರ್ವಜನಿಕ ರಸ್ತೆಗಳು ಹಾಗೂ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗಗಳನ್ನು ರಾಜಾರೋಷವಾಗಿ ಒತ್ತುವರಿ ಮಾಡಲಾಗುತ್ತಿದೆ. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸದೆ ಮೌನ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಗರಸಭೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಗಮನಹರಿಸಬೇಕು. ಕಸದ ಗಾಡಿಗೆ ಅಗತ್ಯ ಸಿಬ್ಬಂದಿ ನೇಮಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಹಾಗೂ ಒತ್ತುವರಿ ತೆರವುಗೊಳಿಸುವ ಮೂಲಕ ನಾಗರಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಎಸ್.ವಿ. ರಂಗನಾಥ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Share News