Share News

ಅಮರಾವತಿ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಪ್ರಚಂಡ ಗೆಲುವು ಸಾಧಿಸಿ ನಟ ವಿಜಯ್ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ, ನೆರೆಯ ಆಂಧ್ರಪ್ರದೇಶದಲ್ಲೂ ಇದರ ಸಂಚಲನ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟ ವಿಜಯ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ರಾಜಕೀಯ ಜರ್ನಿಯನ್ನು ಹೋಲಿಸಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಇದೀಗ ಜನಸೇನಾ ಪಕ್ಷದ ಅಧಿನಾಯಕ ಪವನ್ ಕಲ್ಯಾಣ್ ಅವರು ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ.

​ಮಂಗಳಗಿರಿಯ ಜನಸೇನಾ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ವಿಜಯ್ ಸಿಎಂ ಆದ ಬಳಿಕ ಅಭಿಮಾನಿಗಳು ಮತ್ತು ಸಾರ್ವಜನಿಕರು ಆಂಧ್ರದಲ್ಲೂ ಅದೇ ಮ್ಯಾಜಿಕ್ ಮಾಡುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.

ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಟರೊಬ್ಬರು ಪಕ್ಷ ಸ್ಥಾಪಿಸಿ ನೇರವಾಗಿ ಮುಖ್ಯಮಂತ್ರಿಯಾಗಿದ್ದಾರೆ. ನೀವೂ ಆಂಧ್ರಪ್ರದೇಶದಲ್ಲಿ ಅದೇ ರೀತಿ ಒಂಟಿಯಾಗಿ ಸ್ಪರ್ಧಿಸಿ ಸಿಎಂ ಆಗಬೇಕಿತ್ತು ಎಂದು ಹಲವರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಆಂಧ್ರದ ರಾಜಕೀಯ ಪರಿಸ್ಥಿತಿಯೇ ಬೇರೆ, ತಮಿಳುನಾಡಿನ ಪರಿಸ್ಥಿತಿಯೇ ಬೇರೆ” ಎಂದರು.

​ತಮ್ಮ ನಿಲುವನ್ನು ಸ್ಪಷ್ಟಪಡಿಸಲು ತೆಲುಗಿನ ಪ್ರಸಿದ್ಧ ಗಾದೆಯೊಂದನ್ನು ಉಲ್ಲೇಖಿಸಿದ ಅವರು, “ಇದು ನೆರೆಯವರ ಮದುವೆಗೆ ನಮ್ಮ ಮನೆಯ ಚಿಕ್ಕ ಮಕ್ಕಳು ಅನಗತ್ಯ ಉತ್ಸಾಹ ತೋರಿದಂತಿದೆ. ಅದು ತಮ್ಮ ಮನೆಯ ಮದುವೆಯೇ ಅಲ್ಲ ಎಂಬ ಅರಿವಿಲ್ಲದೆ ಮಕ್ಕಳು ಓಡಾಡುವಂತೆ ಅಭಿಮಾನಿಗಳು ವರ್ತಿಸುತ್ತಿದ್ದಾರೆ. ನಾನು 2019ರ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸಿದ್ದೆ. ಆಗ ಜನ ನನಗೆ ಹೇಗೆ ಸಾಥ್ ನೀಡಿದರು ಎಂಬುದು ಎಲ್ಲರಿಗೂ ಗೊತ್ತು. ಆಗ ಯಾರೂ ನನ್ನ ಜೊತೆ ನಿಲ್ಲಲಿಲ್ಲ. ಹೀಗಿರುವಾಗ ತಮಿಳುನಾಡಿಗೆ ಆಂಧ್ರವನ್ನು ಹೋಲಿಕೆ ಮಾಡಬೇಡಿ” ಎಂದು ಮನವಿ ಮಾಡಿದರು.

ಇದೇ ವೇದಿಕೆಯಲ್ಲಿ ಪವನ್ ಕಲ್ಯಾಣ್ ಅವರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

​”ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನನಗೆ ತೀವ್ರವಾದ ಶ್ವಾಸಕೋಶದ ಸೋಂಕು (Lung Infection) ಉಂಟಾಗಿತ್ತು. ಆ ದೈಹಿಕ ಸಮಸ್ಯೆಯ ಪರಿಣಾಮಗಳು ಇಂದಿಗೂ ನನ್ನನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ಇದರ ಜೊತೆಗೆ ರಾಜಕೀಯ ಪ್ರವಾಸಗಳ ವೇಳೆ ಧೂಳು ತಾಗುವುದರಿಂದ ಗಂಭೀರವಾದ ಸೈನಸ್ ಸಮಸ್ಯೆ ಕೂಡ ಎದುರಾಗಿದೆ. ಒಂದು ಹಂತದಲ್ಲಿ ಈ ಆರೋಗ್ಯ ಏರುಪೇರು ನನ್ನ ದೂರದ ದೃಷ್ಟಿಯ (Eyesight) ಮೇಲೂ ತೀವ್ರ ಪರಿಣಾಮ ಬೀರಿತ್ತು” ಎಂದು ಪವನ್ ಕಲ್ಯಾಣ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

​ಸದ್ಯ ಆಂಧ್ರಪ್ರದೇಶದ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಪವನ್ ಕಲ್ಯಾಣ್ ಅವರ ಈ ಹೇಳಿಕೆಗಳು ಸೌತ್ ಸಿನಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.


Share News