Share News

ಬಾಗಲಕುಂಟೆ ಠಾಣಾ ವ್ಯಾಪ್ತಿಯಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 40 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ವ್ಯಕ್ತಿಯೊಬ್ಬರಿಗೆ ಗಾಂಧಿನಗರದ ರಿಯಲ್ ಎಸ್ಟೇಟ್ ಸ್ನೇಹಿತನೊಬ್ಬ ಪರಿಚಯವಾಗಿದ್ದ. “ನನ್ನ ಪರಿಚಯದವರಿಗೆ 50 ಲಕ್ಷದ ಅವಶ್ಯಕತೆ ಇದೆ, ನೀವು ಹಣ ನೀಡಿದರೆ ಅದಕ್ಕೆ ಪ್ರತಿಯಾಗಿ ಒಂದು ಪಟ್ಟು ಹೆಚ್ಚು (ಡಬಲ್) ಹಣ ನೀಡುತ್ತೇವೆ” ಎಂದು ಆಮಿಷ ಒಡ್ಡಿದ್ದ. ಇದನ್ನು ನಂಬಿದ ಫಿರ್ಯಾದುದಾರರು ತಮ್ಮ ಬಳಿಯಿದ್ದ 28.60 ಲಕ್ಷ ಹಣವನ್ನು ತೆಗೆದುಕೊಂಡು ಹೋಟೆಲ್‌ವೊಂದರ ಬಳಿ ಬಂದಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳು ಹಣವನ್ನು ಪಡೆದು, ಅಲ್ಲಿಂದ ಪರಾರಿಯಾಗಿದ್ದರು.

ಈ ಕುರಿತು ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ತನಿಖೆ ಆರಂಭಿಸಿದ ಪೊಲೀಸರು, ಶೆಟ್ಟಿಹಳ್ಳಿಯ ಜುಂಜಪ್ಪ ದೇವಸ್ಥಾನದ ಬಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಆರೋಪಿಗಳು ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ 18.50 ಲಕ್ಷ ಹಣವನ್ನು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆಯ ಎರಡು ವಂಚನೆ ಪ್ರಕರಣಗಳು ಪತ್ತೆಯಾದಂತಾಗಿದೆ.

ವಾಯುವ್ಯ ವಿಭಾಗದ ಡಿಸಿಪಿ ಶ್ರೀ. ನಾಗೇಶ್ ಡಿ ಎಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶ್ರೀ. ರಮೇಶ್ ಅವರ ನೇತೃತ್ವದಲ್ಲಿ ಬಾಗಲಗುಂಟೆ ಇನ್ಸ್‌ಪೆಕ್ಟರ್ ಶ್ರೀ ಹನುಮಂತರಾಜ್ ಎಂ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News