ಶಿವಮೊಗ್ಗ: ನಗರದ ಗಾಂಧಿ ಬಜಾರ್ನಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ನರಸಿಂಹ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಮಹಜರು ಪ್ರಕ್ರಿಯೆ ವೇಳೆ ಪೊಲೀಸರ ಮೇಲೆಯೇ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಇನ್ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕೊಲೆ ಆರೋಪಿ ಮಧು ಗುಂಡೇಟಿನಿಂದ ಗಾಯಗೊಂಡ ರೌಡಿಯಾಗಿದ್ದು, ಈತನ ಹಲ್ಲೆಯಿಂದ ಕೋಟೆ ಪೊಲೀಸ್ ಠಾಣೆಯ ಕ್ರೈಮ್ ಸಿಬ್ಬಂದಿ ಅಂಜನಪ್ಪ ಅವರು ಗಾಯಗೊಂಡಿದ್ದಾರೆ.
ಗಾಂಧಿ ಬಜಾರ್ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ಹಾಗೂ ಇಸ್ಪಿಟ್ ದಂಧೆಕೋರನಾಗಿದ್ದ ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿ ನರಸಿಂಹ ಎಂಬಾತನನ್ನು ಎದುರಾಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿತ್ತು. ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಈ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಕೋಟೆ ಠಾಣೆಯ ಪೊಲೀಸರು ಶನಿವಾರದಂದು ಮಧು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತ ಆರೋಪಿಗಳ ಪೈಕಿ ಪ್ರಮುಖನಾದ ಮಧುನನ್ನು ಇಂದು ಬೆಳಿಗ್ಗೆ ಪೊಲೀಸರು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳ ಪತ್ತೆ ಹಾಗೂ ಘಟನಾ ಸ್ಥಳದ ಮಹಜರು ಪ್ರಕ್ರಿಯೆಗಾಗಿ ಹೊಳೆಬೆನವಳ್ಳಿ ರಿಂಗ್ ರೋಡ್ ಸಮೀಪಕ್ಕೆ ಕರೆದೊಯ್ದಿದ್ದರು. ಈ ವೇಳೆ ಪೊಲೀಸರ ಕಣ್ಣಿಗೆ ಮಣ್ಣೆರಚಲು ಸಂಚು ರೂಪಿಸಿದ ಆರೋಪಿ ಮಧು, ತಕ್ಷಣವೇ ಪೊಲೀಸ್ ಸಿಬ್ಬಂದಿ ಅಂಜನಪ್ಪ ಅವರ ಮೇಲೆ ದಿಢೀರ್ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಆರೋಪಿ ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ರೌಡಿಗೆ ಕಟು ಎಚ್ಚರಿಕೆ ನೀಡಿದ್ದಾರೆ. ಆದರೂ ಪೊಲೀಸರ ಆದೇಶಕ್ಕೆ ಮಣಿಯದ ಆರೋಪಿ ಮುನ್ನುಗ್ಗಲು ಯತ್ನಿಸಿದಾಗ, ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಅವರು ತಮ್ಮ ಹಾಗೂ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿ ಮಧುನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟು ತಿಂದು ಬಿದ್ದ ಆರೋಪಿ ಮಧು ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿ ಅಂಜನಪ್ಪ ಇಬ್ಬರನ್ನೂ ತಕ್ಷಣವೇ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಬಿ. ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮುಖಾಮುಖಿ (ಎನ್ಕೌಂಟರ್) ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.