ಕೆಜಿಎಫ್: ನಗರದಲ್ಲಿ ಸಾರ್ವಜನಿಕರನ್ನು ಬೆದರಿಸಿ ಚಿನ್ನದ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಕೆಜಿಎಫ್‌ನ ಆಂಡರಸನ್‌ಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಮಾಲನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ಆಂಡರಸನ್‌ಪೇಟೆಯ ಲೂರ್ದ್ ನಗರದ ನಿವಾಸಿಗಳಾದ ಸ್ಟೀಫನ್ ರಾಜ್ (21) ಮತ್ತು ರೆಕ್ಸೂನ್ (20) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 12 ರಂದು ನಗರಸಭೆಯ ಮಾಜಿ ಸದಸ್ಯರಾದ ವೇಣುಗೋಪಾಲ್ ಅವರು ಇಲ್ಲಿನ ಮೋಹನ್ ಸೇಠ್ ನಿವಾಸದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಧಾವಿಸಿದ ಆರೋಪಿಗಳಾದ ಸ್ಟೀಫನ್ ರಾಜ್ ಮತ್ತು ರೆಕ್ಸೂನ್, ವೇಣುಗೋಪಾಲ್ ಅವರಿಗೆ ಏಕಾಏಕಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಅವರ ಕತ್ತಿನಲ್ಲಿದ್ದ ಸುಮಾರು 52 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಈ ದೌರ್ಜನ್ಯದ ಕುರಿತು ಮಾಜಿ ಸದಸ್ಯ ವೇಣುಗೋಪಾಲ್ ಅವರು ಆಂಡರಸನ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ನಗರಸಭೆಯ ಮಾಜಿ ಸದಸ್ಯರ ಮೇಲೆಯೇ ನಡೆದ ಈ ಸರಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದ್ದರು. ತಾಂತ್ರಿಕ ಹಾಗೂ ಖಚಿತ ಮಾಹಿತಿ ಮೇರೆಗೆ ಭಾನುವಾರ ದಾಳಿ ನಡೆಸಿದ ಸಕ್ಸಸ್ ಫುಲ್ ಪೊಲೀಸ್ ತಂಡ, ಇಬ್ಬರೂ ಆರೋಪಿಗಳನ್ನು ಕದ್ದ 52 ಗ್ರಾಂ ಚಿನ್ನದ ಸರದ (ಮಾಲು) ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೆಜಿಎಫ್ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಹೊನ್ನೇಗೌಡ, ಚಂದ್ರಶೇಖರ್, ಮನ್ಮಥ ಹಾಗೂ ಸಿಬ್ಬಂದಿಗಳಾದ ವೇಣುಗೋಪಾಲ್, ಸುರೇಶ್ ಕುಮಾರ್, ರಾಜೇಂದ್ರ, ರವಿಕುಮಾರ್, ಮಧುಕುಮಾರ್, ಗಜೇಂದ್ರ, ರಘು, ಮುರಳಿ, ಪ್ರಕಾಶ್ ಮತ್ತು ಮಂಜುನಾಥ್ ಅವರು ಪಾಲ್ಗೊಂಡು ಪ್ರಮುಖ ಪಾತ್ರ ವಹಿಸಿದ್ದರು. ಪೊಲೀಸ್ ಅಧಿಕಾರಿಗಳ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.