Share News

ಗದಗ: ಜೈಲಿನಿಂದ ಹೊರಬಂದರೂ ಬುದ್ಧಿ ಕಲಿಯದ ಕಿರಾತಕನೊಬ್ಬ, ತನ್ನನ್ನು ಜೈಲಿಗೆ ಕಳುಹಿಸಿದ್ದ ಅಪ್ರಾಪ್ತ ಬಾಲಕಿಯ ಮೇಲೆಯೇ ಸೇಡು ತೀರಿಸಿಕೊಳ್ಳಲು ಎರಡನೇ ಬಾರಿಗೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಬೆಳಕಿಗೆ ಬಂದಿದೆ. ದೌರ್ಜನ್ಯ ಎಸಗಿದ ಮುಖ್ಯ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ ಸ್ನೇಹಿತನನ್ನು ಪೊಲೀಸರು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

​ಬಂಧಿತರನ್ನು ಅಲ್ಲಾಭಕ್ಷಿ ಕೊಪ್ಪದ (ಮುಖ್ಯ ಆರೋಪಿ) ಹಾಗೂ ಆತನಿಗೆ ಸಹಕರಿಸಿದ ಆಸೀಫ್ ನದಫ್ ಎಂದು ಗುರುತಿಸಲಾಗಿದೆ.

ಆರೋಪಿ ಅಲ್ಲಾಭಕ್ಷಿ ಕೊಪ್ಪದ ಕಳೆದ 2025 ರಲ್ಲಿ ಇದೇ 17 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದನು. ಈ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿ ಈತ ಜೈಲು ಸೇರಿದ್ದನು. ಆದರೆ, ಇತ್ತೀಚೆಗಷ್ಟೇ ಕೋರ್ಟ್‌ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಈತ, ತನ್ನನ್ನು ಜೈಲಿಗೆ ಕಳುಹಿಸಿದ ಬಾಲಕಿಯ ಮೇಲೆ ದ್ವೇಷ ಸಾಧಿಸಲು ಹೊಂಚು ಹಾಕುತ್ತಿದ್ದನು ಎನ್ನಲಾಗಿದೆ.

​ಮೇ 23 ರಂದು ಬಾಲಕಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂಪ್ಯೂಟರ್ ಕ್ಲಾಸ್‌ಗೆ ಹೋಗುತ್ತಿದ್ದಾಗ, ಆರೋಪಿ ಅಲ್ಲಾಭಕ್ಷಿ ಹಾಗೂ ಆತನ ಸ್ನೇಹಿತ ಆಸೀಫ್ ನದಫ್ ಗೂಡ್ಸ್ ವಾಹನದಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪಟ್ಟಣದ ಪೋಸ್ಟ್ ಆಫೀಸ್ ಬಳಿ ಬಾಲಕಿಯನ್ನು ತಡೆದು, “ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ” ಎಂದು ಸುಳ್ಳು ಹೇಳಿ ಬಲವಂತವಾಗಿ ವಾಹನಕ್ಕೆ ತುಂಬಿಕೊಂಡು ಅಪಹರಿಸಿದ್ದಾರೆ.

ಬಾಲಕಿಯನ್ನು ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ನಿರ್ಜನ ಜಮೀನಿಗೆ ಕರೆದೊಯ್ದ ಮುಖ್ಯ ಆರೋಪಿ ಅಲ್ಲಾಭಕ್ಷಿ, ಅಲ್ಲಿ ಆಕೆಯ ಮೇಲೆ ದಾರುಣವಾಗಿ ಅತ್ಯಾಚಾರ ಎಸಗಿದ್ದಾನೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಬಾಲಕಿ ಹೇಗೋ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣವೇ ಪೋಷಕರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ಅಲರ್ಟ್ ಆದ ಲಕ್ಷ್ಮೇಶ್ವರ ಠಾಣೆಯ ಪೊಲೀಸರು, ತೀವ್ರ ಕಾರ್ಯಾಚರಣೆ ನಡೆಸಿ ಮುಖ್ಯ ಆರೋಪಿ ಅಲ್ಲಾಭಕ್ಷಿ ಕೊಪ್ಪದ ಹಾಗೂ ಆತನಿಗೆ ಸಾಥ್ ನೀಡಿದ ಆಸೀಫ್ ನದಫ್ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

​ಜೈಲಿಗೆ ಹೋಗಿ ಬಂದರೂ ಕ್ರಿಮಿನಲ್‌ಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂತಹ ನಟೋರಿಯಸ್ ಕಾಮುಕರಿಗೆ ಕಠಿಣಾತಿಕಠಿಣ ಜೀವಾವಧಿ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 


Share News