ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಸುಮಾರು 450ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 38 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸಹಕಾರ ನಗರದಲ್ಲಿ ‘ದೀಕ್ಷಾ ಎಜುಕೇಶನ್ ಅಕಾಡೆಮಿ’ ಮತ್ತು ‘ಆಶೀರ್ವಾದ್ ಎಂಟರ್‌ಪ್ರೈಸಸ್’ ಎಂಬ ಕಚೇರಿಗಳನ್ನು ತೆರೆದಿದ್ದರು. ನ್ಯಾಯಾಲಯಗಳಲ್ಲಿ ಖಾಲಿ ಇರುವ ಎಸ್‌ಡಿಎ (SDA), ಎಫ್‌ಡಿಎ (FDA), ಪ್ರೊಸೆಸ್ ಸರ್ವರ್, ಪೀವನ್ ಹಾಗೂ ಡ್ರೈವರ್ ಕೆಲಸಗಳನ್ನು ಕೊಡಿಸುವುದಾಗಿ ಏಜೆಂಟರ ಮೂಲಕ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದರು. ನಂಬಿಕೆ ಮೂಡಿಸಲು ಅಭ್ಯರ್ಥಿಗಳಿಂದ ಅರ್ಜಿ ನಮೂನೆ ಭರ್ತಿ ಮಾಡಿಸಿಕೊಳ್ಳುವುದು, ಗ್ರೀನ್ ಶೀಟ್‌ನಲ್ಲಿ ಸಹಿ ಮತ್ತು ಹೆಬ್ಬೆರಳಿನ ಗುರುತು ಪಡೆಯುವ ನಾಟಕವಾಡುತ್ತಿದ್ದರು. ಅಭ್ಯರ್ಥಿಗಳಿಗೆ ತಾವು ಕೆಲಸಕ್ಕೆ ಆಯ್ಕೆಯಾಗಿದ್ದೇವೆ ಎಂದು ನಂಬಿಸಲು, ನ್ಯಾಯಾಲಯದ ಹೆಸರಿನಲ್ಲೇ ನಕಲಿ ಸೀಲು ಮತ್ತು ಸಹಿ ಇರುವ ನಕಲಿ ಸೆಲೆಕ್ಷನ್ ಲಿಸ್ಟ್ ಹಾಗೂ ಆದೇಶ ಪ್ರತಿಗಳನ್ನು ನೀಡುತ್ತಿದ್ದರು. ಈ ಮೂಲಕ ಹಂತ ಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ಆನ್‌ಲೈನ್ ಮತ್ತು ನಗದು ರೂಪದಲ್ಲಿ ವಸೂಲಿ ಮಾಡುತ್ತಿದ್ದರು.
ಈ ಕುರಿತು ಸಿಸಿಬಿ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಅಪರ ಪೊಲೀಸ್ ಆಯುಕ್ತರಾದ ಶ್ರೀ. ಅಜಯ್ ಹಿಲೋರಿ ಹಾಗೂ ಉಪ ಪೊಲೀಸ್ ಆಯುಕ್ತರಾದ ಶ್ರೀ. ಹರಿಬಾಬು ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ದಳವು ಈ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ಸೆರೆಹಿಡಿದಿದೆ. ಪ್ರಕರಣದ ಇತರ ಸಹಚರರು ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್