Share News

ಧಾರವಾಡ: ಬೆಳಗಾವಿ ಮತ್ತು ಧಾರವಾಡ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನವಲಗುಂದ ವಲಯದ ಅಧಿಕಾರಿಗಳು ಅಣ್ಣಿಗೇರಿ ಶರಹದ್ದಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಅಣ್ಣಿಗೇರಿಯ ಹರಣಶಿಕಾರಿ ಕಾಲೋನಿಯ ನಿವಾಸಿಗಳಾದ ಶೇಖರ ವಿರೂಪಾಕ್ಷಿ ಹರಣಶಿಕಾರಿ (26) ಮತ್ತು ಸಾಗರ ವಿರೂಪಾಕ್ಷಪ್ಪ ಹರಣಶಿಕಾರಿ (31) ಬಂಧಿತ ಆರೋಪಿಗಳಾಗಿದ್ದಾರೆ. ಕಾರ್ಯಾಚರಣೆ ವೇಳೆ ಕಳ್ಳಭಟ್ಟಿ ಸಾಗಾಟಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನದ ಮಾಲೀಕ ಪರಾರಿಯಾಗಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ.

ಜೂನ್ 22ರಂದು ಅಣ್ಣಿಗೇರಿ ಶರಹದ್ದಿನ ಕಣಗಲ್ಲ ಹಳ್ಳದ ಬಳಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ನವಲಗುಂದ ವಲಯದ ಅಬಕಾರಿ ನಿರೀಕ್ಷಕ ರಾಮು ಆರೆನ್ನವರ, ಉಪ ನಿರೀಕ್ಷಕ ಅನುರಾಧ ಓಲೇಕಾರ, ವಾಹನ ಚಾಲಕ ಮಲ್ಲಿಕಾರ್ಜುನ ವಾಲೀಕಾರ, ಗೃಹ ರಕ್ಷಕರಾದ ಕಲ್ಲಯ್ಯ ಹೊಸಮನಿ ಹಾಗೂ ಶರೀಫ್ ಹುಡೇದ ಅವರನ್ನೊಳಗೊಂಡ ತಂಡವು ಪಂಚರ ಸಮ್ಮುಖದಲ್ಲಿ ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಹೆಡೆಮುರಿಕಟ್ಟಿದೆ.

ದಾಳಿಯ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ದೊಡ್ಡ ಪ್ರಮಾಣದ ಕಳ್ಳಭಟ್ಟಿ ಸಾಮಗ್ರಿ ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

100 ಲೀಟರ್ ಸಾಮರ್ಥ್ಯದ 14 ಪ್ಲಾಸ್ಟಿಕ್ ಬ್ಯಾರಲ್‌ ಹಾಗೂ 200 ಲೀಟರ್ ಸಾಮರ್ಥ್ಯದ 2 ಬ್ಯಾರಲ್‌ಗಳಲ್ಲಿದ್ದ ಒಟ್ಟು 1700 ಲೀಟರ್ ಬೆಲ್ಲದ ರಾಸಾಯನ (ಕೊಳೆ).

ಹಿತ್ತಾಳೆ ಕೊಡ ಮತ್ತು ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಒಟ್ಟು 3 ಲೀಟರ್ ಕಳ್ಳಭಟ್ಟಿ ಸಾರಾಯಿ.ಅಂದಾಜು 30 ಕೆಜಿ ಬೆಲ್ಲ,ಕಪ್ಪು ಬಣ್ಣದ ಹೀರೋ ಹೆಚ್.ಎಫ್ ಡಿಲಕ್ಸ್ ದ್ವಿಚಕ್ರ ವಾಹನ (ನೊಂದಣಿ ಸಂಖ್ಯೆ: KA-26 V-6122).

ಒಪ್ಪೋ (Oppo) ಮತ್ತು ಇನ್ಫಿನಿಕ್ಸ್ (Infinix) ಕಂಪನಿಯ 2 ಸ್ಮಾರ್ಟ್‌ಫೋನ್‌ಗಳು.

ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965 ರಡಿಯಲ್ಲಿ ಗುನ್ನೆ ನಂ-99/2025-26 ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಬಕಾರಿ ನಿರೀಕ್ಷಕರಾದ ರಾಮು ಆರೆನ್ನವರ ಅವರು ಪ್ರಥಮ ವರ್ತಮಾನ ವರದಿ (FIR) ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

 


Share News