ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಸಮೀಪದ ಗಡಿಕಲ್ಲಿನಲ್ಲಿ ದನ ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ಅಂತರ ಜಿಲ್ಲಾ ಮಾದರಿಯ ಆರೋಪಿಗಳನ್ನು ತೀರ್ಥಹಳ್ಳಿ ಠಾಣೆಯ ಪೊಲೀಸರು ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ ಕರಾರುವಾಕ್ಕಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ನಗರದ ಟಿಪ್ಪುನಗರದ ನಿವಾಸಿಯಾದ ರೋಷನ್ ಬೇಗ್ (31) ಹಾಗೂ ಅಣ್ಣಾನಗರದ ನಿವಾಸಿ ಇಮ್ರಾನ್ (39) ಬಂಧಿತ ಕಳ್ಳರು ಎಂದು ಗುರುತಿಸಲಾಗಿದೆ.
ಆರೋಪಿಗಳು ದನಗಳನ್ನು ಕದ್ದು ಸಾಗಿಸಲು ಲಕ್ಸುರಿ ಕಾರನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು ₹4 ಲಕ್ಷ ಮೌಲ್ಯದ ಮಾರುತಿ ಸುಜುಕಿ ‘ಎರ್ಟಿಗಾ’ ಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ದನ ಕಳ್ಳತನ ಯತ್ನ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಜಾನುವಾರು ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನೆಟ್‌ವರ್ಕ್ ಚುರುಕುಗೊಳಿಸಿದ್ದರು. ಈ ಭರ್ಜರಿ ಕಾರ್ಯಾಚರಣೆಯನ್ನು ತೀರ್ಥಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಪಿಎಸ್‌ಐ ಆರ್. ಸುಷ್ಮಾ ಹಾಗೂ ಪಿಎಸ್‌ಐ ಯುವರಾಜ್ ಅವರ ನೇತೃತ್ವದ ಹೆಮ್ಮೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಅತ್ಯಂತ ಯಶಸ್ವಿಯಾಗಿ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.