ರಾಜಧಾನಿಯಲ್ಲಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ಮಾದಕ ಕೃತ್ಯಗಳ ವಿರುದ್ಧ ಕರಾರುವಾಕ್ ಕಾರ್ಯಾಚರಣೆ ಮುಂದುವರಿಸಿರುವ ಜೀವನ ಭೀಮಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಬೃಹತ್ ಪ್ರಮಾಣದ ಅಕ್ರಮ ಇ-ಸಿಗರೇಟ್ ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇ-ಸಿಗರೇಟ್ ನಿಷೇಧ ಕಾಯ್ದೆಯಡಿ (PECA) ಜೀವನ ಭೀಮಾನಗರ ಪೊಲೀಸರು ನಡೆಸಿದ ಈ ಮಿಂಚಿನ ದಾಳಿಯಲ್ಲಿ, ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದ್ದ ಅಂದಾಜು ₹45 ಲಕ್ಷ ಮೌಲ್ಯದ ನಿಷೇಧಿತ ಇ-ಸಿಗರೇಟ್ಗಳು, ವಿವಿಧ ಬ್ರಾಂಡ್ಗಳ ವಿದೇಶಿ ಸಿಗರೇಟ್ಗಳು ಹಾಗೂ ಹುಕ್ಕಾ ಫ್ಲೇವರ್ ಒಳಗೊಂಡ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಐಟಿ-ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಸರ್ಕಾರದಿಂದ ಸಂಪೂರ್ಣ ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್ ಹಾಗೂ ಹುಕ್ಕಾ ಉತ್ಪನ್ನಗಳನ್ನು ಕದ್ದುಮುಚ್ಚಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಜೀವನ ಭೀಮಾನಗರ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಕ್ರಮ ದಂಧೆಯ ಜಾಲಕ್ಕೆ ಭಾರಿ ಪೆಟ್ಟು ನೀಡಿದ್ದಾರೆ.
ಕಾನೂನುಬಾಹಿರ ಉತ್ಪನ್ನಗಳ ಮಾರಾಟ ಜಾಲದ ವಿರುದ್ಧ ಇಲಾಖೆಯು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈ ದಂಧೆಯ ಹಿಂದೆ ಇರುವ ಪ್ರಮುಖ ಕಿಂಗ್ಪಿನ್ ಹಾಗೂ ಪೂರೈಕೆದಾರರ (Suppliers) ಪತ್ತೆಗಾಗಿ ಜಾಲ ಬೀಸಿದ್ದಾರೆ.
Arakshakara Times Media
Related posts
