ಮುಂಗಾರು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನದಿಗಳಲ್ಲಿ ಎಲ್ಲ ರೀತಿಯ ಮರಳುಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಅವಿರತವಾಗಿ ನಡೆಯುತ್ತಿದ್ದ ಭಾರಿ ಪ್ರಮಾಣದ ಅಕ್ರಮ ಮರಳುಗಾರಿಕೆ ಜಾಲವನ್ನು ಲೋಕಾಯುಕ್ತ ಪೊಲೀಸರು ಭೇದಿಸಿದ್ದಾರೆ. ಸಾರ್ವಜನಿಕ ದೂರುಗಳ ಆಧಾರದ ಮೇಲೆ ರಾಣೇಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 17,779 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಸಿ. ಮಧುಸೂದನ್ ನೇತೃತ್ವದಲ್ಲಿ ನಡೆದ ಈ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ತುಂಗಭದ್ರಾ ನದಿ ಪಾತ್ರದ ನಿಟಪಳ್ಳಿ, ಚಂದಾಪುರ, ಬೇಲೂರು, ಐರಣಿ, ಹರನಗಿರಿ, ಕೋಟಿಹಾಳ ಹಾಗೂ ಚಿಕ್ಕಕುರುವತ್ತಿ ಸೇರಿದಂತೆ ಒಟ್ಟು ಎಂಟು ಸೂಕ್ಷ್ಮ ಪ್ರದೇಶಗಳಲ್ಲಿ ಲೋಕಾಯುಕ್ತ ಪಡೆ ದಾಳಿ ನಡೆಸಿದೆ. ಈ ವೇಳೆ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದ್ದು, ಮರಳು ಸಾಗಣೆಗೆ ಬಳಸುತ್ತಿದ್ದ 2 ಜೆಸಿಬಿ ಯಂತ್ರಗಳು ಹಾಗೂ ನದಿಯಿಂದ ಮರಳು ಎತ್ತಲು ಬಳಸುತ್ತಿದ್ದ 4 ದೋಣಿಗಳನ್ನು (ತೆಪ್ಪ) ಜಪ್ತಿ ಮಾಡಿಕೊಳ್ಳಲಾಗಿದೆ.
ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯ ಇಲಾಖೆಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮರಳು ಕಳ್ಳತನ ತಡೆಯಲು ನಿಯೋಜನೆಗೊಂಡಿದ್ದ ಕೆಲ ಗಸ್ತು ಸಿಬ್ಬಂದಿಯೇ ಮರಳು ಮಾಫಿಯಾದೊಂದಿಗೆ ಕೈಜೋಡಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಗಣಿ ಇಲಾಖೆಯ ಅಧಿಕಾರಿಯೊಬ್ಬರು, “ಕೆಲ ಪ್ರಭಾವಿ ರಾಜಕಾರಣಿಗಳು ಅಕ್ರಮ ಮರಳುಗಾರರಿಗೆ ಬೆಂಬಲವಾಗಿ ನಿಂತಿದ್ದು, ದಾಳಿ ನಡೆಸದಂತೆ ಇಲಾಖೆಯ ಮೇಲೆ ನಿರಂತರ ರಾಜಕೀಯ ಒತ್ತಡ ಹೇರುತ್ತಿದ್ದಾರೆ” ಎಂದು ಬಹಿರಂಗಪಡಿಸಿದ್ದಾರೆ.
ಈ ಅಕ್ರಮ ದಂಧೆಯಿಂದಾಗಿ ನದಿ ಪಾತ್ರಗಳು ಸಂಪೂರ್ಣ ಕ್ಷೀಣಿಸುತ್ತಿದ್ದು, ಹತ್ತಿರದ ಕೃಷಿ ಭೂಮಿ ಹಾಗೂ ಪರಿಸರ ನಾಶವಾಗುತ್ತಿದೆ. ಇದನ್ನು ಪ್ರಶ್ನಿಸಲು ಹೋದ ಗ್ರಾಮಸ್ಥರಿಗೆ ಮರಳು ಕಳ್ಳರು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನೊಂದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಲೋಕಾಯುಕ್ತರ ಈ ಅದ್ಭುತ ಕಾರ್ಯಾಚರಣೆಯನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಈ ದಾಳಿಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮ ಮರಳು ಸಂಗ್ರಹಣೆ ಮತ್ತು ಸಾಗಾಟದ ಆರೋಪದಡಿಯಲ್ಲಿ ಪ್ರಮುಖ ಆರೋಪಿಗಳಾದ ಚಿಕ್ಕಕುರುವತ್ತಿಯ ನಿಂಗಪ್ಪ ಹನುಮಂತಪ್ಪ ಹೊನ್ನತ್ತೆಪ್ಪನವರ, ಗಣೇಶ ಅಶೋಕ ಬಾರ್ಕಿ, ಪ್ರಜ್ವಲ್ ಮಲಕಪ್ಪ ಚನ್ನಗೌಡ್ರ, ವಿನಾಯಕ ಕರಿಬಸಪ್ಪ ಬಾರ್ಕಿ, सुरेश ನಾಗಪ್ಪ ಬಾರ್ಕಿ, ಶಿವು ಹನುಮಂತಪ್ಪ ರಾಮಣ್ಣನವರ, ಹುಚ್ಚಪ್ಪ ನಾಗಪ್ಪ ಹೊನ್ನತ್ತಿ, ವಿವೇಕ ಮಾಂತೇಶಪ್ಪ ಕಲ್ಲಮ್ಮನವರ, ಪ್ರಕಾಶ ನಾಗಪ್ಪ ರಾಮಣ್ಣನವರ, ಕರಬಸಪ್ಪ ನಾಗಪ್ಪ ಕಲ್ಲಮ್ಮನವರ, ಹರನಗಿರಿಯ ಇರ್ಫಾನ್ ಮಹ್ಮದ್ ಶರೀಪ್ ಚಾಕ್ತಿ, ಕೋಟಿಹಾಳದ ವಿರುಪಾಕ್ಷಪ್ಪ ಬಸಪ್ಪ ಕೋರೇರ ಹಾಗೂ ಹೂವಿನ ಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿಯ ರುದ್ರೇಶ ತಿಪ್ಪೇಶಪ್ಪ ತೋರಣಗಟ್ಟಿ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಮುಂದಿನ ತನಿಖೆ ಚುರುಕುಗೊಂಡಿದೆ.
ಬರೋಬ್ಬರಿ 17,779 ಮೆಟ್ರಿಕ್ ಟನ್ ಮರಳು ಜಪ್ತಿಯಾಗಿರುವುದು ಜಿಲ್ಲೆಯಲ್ಲಿ ಮರಳು ಮಾಫಿಯಾ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕೇವಲ ತಳಮಟ್ಟದ ಕೂಲಿ ಆಳುಗಳನ್ನು ಬಂಧಿಸಿದರೆ ಸಾಲದು; ಇದರ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿರುವ ಅಸಲಿ ಕಿಂಗ್‌ಪಿನ್‌ಗಳು ಹಾಗೂ ಅವರಿಗೆ ಬೆಂಗಾವಲಾಗಿ ನಿಂತಿರುವ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಬೇಕಿದೆ ಎಂಬುದೇ ಸಾರ್ವಜನಿಕರ ಆಶಯವಾಗಿದೆ.