ಚಿಕ್ಕಮಗಳೂರು: ಮಲೆನಾಡು ಭಾಗದ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ತೀವ್ರ ಆತಂಕ ಮೂಡಿಸಿದ್ದ ಸರಣಿ ಸರಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಉಪವಿಭಾಗದ ವಿಶೇಷ ಪೊಲೀಸ್ ತಂಡವು ಅತ್ಯಂತ ಯಶಸ್ವಿಯಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಕುಖ್ಯಾತ ಸರಗಳ್ಳನನ್ನು ಹೆಡೆಮುರಿಕಟ್ಟಿದ್ದು, ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯ ವಿಚಾರಣೆಯಿಂದಾಗಿ ಶೃಂಗೇರಿ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರಮುಖ ಸರಗಳ್ಳತನ ಪ್ರಕರಣಗಳು ಸದ್ಯ ಸುಲಭವಾಗಿ ಇತ್ಯರ್ಥಗೊಂಡಿವೆ.
ಶೃಂಗೇರಿ ಘಟನೆ: ಕಳೆದ 2025ರ ಡಿಸೆಂಬರ್ 5ರಂದು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರ ಗ್ರಾಮದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಗುರಿಯಾಗಿಸಿಕೊಂಡಿದ್ದ ಈ ಖದೀಮ, ಆಕೆಯ ಕರಳಿನಲ್ಲಿದ್ದ 24 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದ.
ಹರಿಹರಪುರ ಘಟನೆ: ಇತ್ತೀಚೆಗೆ ಅಂದರೆ 2026ರ ಮೇ 10ರಂದು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲ್ಮತ್ತೂರು ಗ್ರಾಮದಲ್ಲೂ ಸಹ ಇದೇ ಮಾದರಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ದೋಚಲಾಗಿತ್ತು. ಬಂಧಿತ ಆರೋಪಿಯು ಈ ಎರಡೂ ಗಂಭೀರ ಕೃತ್ಯಗಳನ್ನು ತಾನೇ ಎಸಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿಯಿಂದ ಪೊಲೀಸರು ಸದ್ಯ ಮಾರುಕಟ್ಟೆಯಲ್ಲಿ ಸುಮಾರು ₹4,83,000/- (ನಾಲ್ಕು ಲಕ್ಷದ ಎಂಬತ್ತಮೂರು ಸಾವಿರ ರೂಪಾಯಿ) ಒಟ್ಟು ಮೌಲ್ಯದ ಚಿನ್ನದ ಸರಗಳು, ಕೃತ್ಯ ಎಸಗಲು ಮತ್ತು ತಲೆಮರೆಸಿಕೊಳ್ಳಲು ಬಳಸುತ್ತಿದ್ದ ಒಂದು ಬೈಕ್ ಹಾಗೂ ಒಂದು ಮೊಬೈಲ್ ಫೋನ್ ಅನ್ನು ಯಶಸ್ವಿಯಾಗಿ ಜಪ್ತಿ ಮಾಡಿದ್ದಾರೆ.
ಈ ಸರಣಿ ಕಳ್ಳತನಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯ ಪತ್ತೆಗಾಗಿ ಕೊಪ್ಪ ಉಪವಿಭಾಗದ ಡಿ.ವೈ.ಎಸ್.ಪಿ. ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸ್ ತಂಡದ ವಿವರ ಹೀಗಿದೆ:
ನೇತೃತ್ವ: ಶ್ರೀ ಬಾಲಾಜಿ ಸಿಂಗ್ ಎಂ ಜೆ (ಡಿ.ವೈ.ಎಸ್.ಪಿ, ಕೊಪ್ಪ ಉಪವಿಭಾಗ).
ತಂಡದ ಪ್ರಮುಖ ಅಧಿಕಾರಿಗಳು: ಶ್ರೀ ಅಬ್ದುಲ್ ಖಾದರ್ (ಪ್ರಭಾರ ಪಿ.ಐ, ಶೃಂಗೇರಿ), ಶ್ರೀ ನಾಗರಾಜ್ ಬಿ ಆರ್ ಮತ್ತು ಶ್ರೀ ಅಬಿಷೇಕ್ ಕೆ (ಪಿ.ಎಸ್.ಐ, ಶೃಂಗೇರಿ), ಶ್ರೀ ಮಧು ಬಿ (ಪಿ.ಎಸ್.ಐ, ಕೊಪ್ಪ), ಶ್ರೀ ಶ್ರೀಧರ್ ನಾಯ್ಕ (ಪಿ.ಎಸ್.ಐ, ಹರಿಹರಪುರ).ರಚಿತ್, ಪರಮೇಶ್, ಅಜಯ್ ಸಿಂಗ್, ಸದಾಶಿವ ಕಾರಜೋಳ, ಗಗನ್ ಕೆ ಆರ್, ಪ್ರವಿಣ್ ನಲವಾಗಲ, ವಿಜಯ ಕುಮಾರ ಬಿಳಗಿ, ಪ್ರಶಾಂತ್, ಯುವರಾಜ, ಅಂಕಿತ್, ಎಲ್ದೋ ಮತ್ತು ರಾಜೇಶ್.
ಅತ್ಯಂತ ಕಡಿಮೆ ಅವಧಿಯಲ್ಲಿ ತಾಂತ್ರಿಕ ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಮಹಿಳೆಯರ ಚಿನ್ನದ ಸರಗಳ ಸಮೇತ ಆರೋಪಿಯನ್ನು ಹೆಡೆಮುರಿಕಟ್ಟಿದ ಕೊಪ್ಪ ಉಪವಿಭಾಗದ ವಿಶೇಷ ಪೊಲೀಸ್ ತಂಡದ ಹಗಲಿರುಳಿನ ಶ್ರಮ ಹಾಗೂ ದಕ್ಷ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳು ಹರಿದುಬರುತ್ತಿವೆ.