Share News

ಕನಕಪುರ: ಕಾಡು ಪ್ರಾಣಿಗಳ ಹತ್ಯೆ ಯತ್ನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನು (ಬೇಲ್) ಪಡೆದು ಹೊರಬಂದಿದ್ದ ವೃತ್ತಿಪರ ಬೇಟೆಗಾರರು, ಮತ್ತೆ ಜಿಂಕೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಜಾಲಕ್ಕೆ ಬಿದ್ದಿದ್ದಾರೆ. ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ತಾಲೂಕಿನ ನಲ್ಲಹಳ್ಳಿ ಗ್ರಾಮದ ನಿವಾಸಿಗಳಾದ ರಘು (30), ಪವನ್ ಕುಮಾರ್ (19), ಕೃಷ್ಣ (20) ಮತ್ತು ಮಾದೇಶ (19) ಬಂಧಿತ ಕಟುಕ ಬೇಟೆಗಾರರಾಗಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಗಳು ಮಂಗಳವಾರ ರಾತ್ರಿ ಮಳವಳ್ಳಿ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಜಿಂಕೆಯೊಂದನ್ನು ಕ್ರೂರವಾಗಿ ಬೇಟೆಯಾಡಿದ್ದರು. ಬುಧವಾರ ಮುಂಜಾನೆ ಬೇಟೆಯಾಡಿದ ಜಿಂಕೆಯ ಮಾಂಸದೊಂದಿಗೆ ತಮ್ಮ ಸ್ವಗ್ರಾಮಕ್ಕೆ ಗಡಿ ಭಾಗದ ಮೂಲಕ ತೆರಳುತ್ತಿದ್ದರು. ಈ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಾತನೂರು ಅರಣ್ಯ ಅಧಿಕಾರಿಗಳ ತಂಡ ತಾಲೂಕಿನ ಗಡಿ ಭಾಗದ ಹೊನಗನಹಳ್ಳಿ ಸಮೀಪ ಹೊಂಚು ಹಾಕಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

ಬಂಧಿತ ಆರೋಪಿಗಳಿಂದ ಬೇಟೆಗೆ ಬಳಸಿದ್ದ ಎರಡು ನಾಡ ಬಂದೂಕುಗಳು, 2 ಮದ್ದುಗುಂಡುಗಳು, ಒಂದು ಹಣೆ ಬ್ಯಾಟರಿ (Head Torch) ಹಾಗೂ ಮಾಂಸ ಸಾಗಾಟಕ್ಕೆ ಬಳಸುತ್ತಿದ್ದ ಒಂದು ಕಾರ್ ಮತ್ತು ಒಂದು ಬೈಕ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಬಂಧಿತರು ಸರಣಿ ಕಾಡು ಪ್ರಾಣಿಗಳ ಬೇಟೆಯಲ್ಲಿ ತೊಡಗಿರುವ ವೃತ್ತಿಪರ ಬೇಟೆಗಾರರಾಗಿದ್ದಾರೆ. ಈ ಹಿಂದೆ ಕೂಡ ವನ್ಯಜೀವಿಗಳ ಹತ್ಯೆ ಯತ್ನ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ ಇವರು, ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದ ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ ಜಿಂಕೆಯನ್ನು ಬೇಟೆಯಾಡಿದ್ದಾರೆ. ಇಂತಹ ಸರಣಿ ಅಪರಾಧಿಗಳ ವಿರುದ್ಧ ಕೇವಲ ಕೇಸ್ ದಾಖಲಿಸದೇ, ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಾತನೂರು ವಲಯ ಅರಣ್ಯ ಅಧಿಕಾರಿ ಬಾಲಕೃಷ್ಣ, ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿ ಅನಿಲ್, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗೋಪಾಲ, ಹನುಮಂತ, ಸತೀಶ್ ಸೇರಿದಂತೆ ಹಲವರು ಸಕ್ರಿಯವಾಗಿ ಭಾಗವಹಿಸಿದ್ದರು.

 


Share News