Share News

ಗೋಕರ್ಣ: ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ಮಾದಕ ವಸ್ತುಗಳ ಜಾಲಕ್ಕೆ ಬ್ರೇಕ್ ಹಾಕಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಜುಲೈ 7ರಂದು ಗೋಕರ್ಣ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮಾದಕ ವಸ್ತು ಪತ್ತೆ ಶ್ವಾನ ದಳದ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶೇಷ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ.

​ಈ ಇಡೀ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಮ್ಮೆಯ ಮಾದಕ ವಸ್ತು ಪತ್ತೆ ಶ್ವಾನ ‘ಸೂಪಾ’ (Supa) ಪ್ರಮುಖ ಆಕರ್ಷಣೆಯಾಗಿ ಕಾರ್ಯನಿರ್ವಹಿಸಿತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ನೇರ ಮಾರ್ಗದರ್ಶನದಲ್ಲಿ ಗೋಕರ್ಣ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ವಾನ ದಳದೊಂದಿಗೆ ಮುಂಜಾನೆಯಿಂದ ತಡರಾತ್ರಿಯವರೆಗೆ ವ್ಯಾಪಕ ತಪಾಸಣೆ ಕೈಗೊಂಡರು. ಗೋಕರ್ಣದ ಪ್ರಮುಖ ಪ್ರವಾಸಿ ತಾಣಗಳಾದ ಮೇನ್ ಬೀಚ್, ಕುಡ್ಲೆ ಬೀಚ್, ರುದ್ರಪಾದ, ಡುಬ್ಬನಶಶಿ, ನಾಡುಮಾಸ್ಕೇರಿ ಹಾಗೂ ಗಂಗೆಕೊಳ್ಳ ಬೀಚ್‌ಗಳಲ್ಲಿರುವ 100ಕ್ಕೂ ಹೆಚ್ಚು ರೆಸಾರ್ಟ್‌ಗಳನ್ನು ಶ್ವಾನ ‘ಸೂಪಾ’ ನೆರವಿನೊಂದಿಗೆ ಜಾಲಾಡಲಾಯಿತು.

​ಇದರೊಂದಿಗೆ ಗೋಕರ್ಣ, ದಂಡೇಬಾಗ್, ಬೆಲೆಹಿತ್ಲು, ಬಿಜ್ಜೂರು, ತಲಗೇರಿ ಮತ್ತು ಚೌಡಗೇರಿ ಗ್ರಾಮಗಳ ಹಲವು ಸಂಶಯಾಸ್ಪದ ಮನೆಗಳ ಮೇಲೂ ಪೊಲೀಸರು ಹಠಾತ್ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.

ತೀವ್ರ ತಪಾಸಣೆಯ ವೇಳೆ ಮಾದಕ ವಸ್ತು ಸೇವಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತದನಂತರ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು (Drugs) ಸೇವಿಸಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಧಿತರ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಎನ್‌ಡಿಪಿಎಸ್ (NDPS Act) ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

“ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುವ ಇಂತಹ ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ, ಮಾರಾಟ ಹಾಗೂ ಸೇವನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಗೋಕರ್ಣ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲೂ ಇಂತಹ ದಿಢೀರ್ ಮತ್ತು ವಿಶೇಷ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಪೊಲೀಸ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

 


Share News