ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಚರ್ಚ್ (Sacred Heart Church) ನಲ್ಲಿ ಗುಡ್ ಫ್ರೈಡೆ ಹಿನ್ನೆಲೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರ ಮೇಲೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಗುಡ್ ಫ್ರೈಡೆ ಪ್ರಯುಕ್ತ ಚರ್ಚ್‌ನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಚರ್ಚ್ ಕಟ್ಟಡದ ಮೇಲ್ಭಾಗದ ಒಳಭಾಗದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಇದ್ದಕ್ಕಿದ್ದಂತೆ ಚದುರಿ ಭಕ್ತರ ಮೇಲೆ ದಾಳಿ ಮಾಡಿವೆ. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜೇನುಗಳ ದಾಳಿಯಿಂದಾಗಿ ಭಕ್ತರು ದಿಕ್ಕಾಪಾಲಾಗಿ ಓಡತೊಡಗಿದರು.
ಜೇನು ದಾಳಿಯಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಭಕ್ತರಿಗೆ ಕಚ್ಚಿದ ಪರಿಣಾಮ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಇವರನ್ನು ನಗರದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ಚರ್ಚ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮುನ್ನೆಚ್ಚರಿಕೆ: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಐತಿಹಾಸಿಕ ಕಟ್ಟಡಗಳಲ್ಲಿ ಜೇನುಗೂಡುಗಳಿದ್ದರೆ ಕೂಡಲೇ ಅಗ್ನಿಶಾಮಕ ದಳ ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.