ಬೆಂಗಳೂರು: “ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದು ಬೆದರಿಕೆ ಹಾಕುತ್ತಿರುವ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ನಂತರ ಆತನನ್ನು ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು” ಎಂದು ಗೃಹ ಸಚಿವ ಪ್ರಿಯಾಂಕಾ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಭಾಗದ ನಾಯಕರೊಬ್ಬರ ಹೇಳಿಕೆಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ತಿರುಗೇಟು ನೀಡಿರುವ ಅವರು, “ಅಸ್ತಿತ್ವ ಕಳೆದುಕೊಂಡು ಕತ್ತಲೆ ಜಗತ್ತಿನ ಅತೃಪ್ತ ಆತ್ಮದಂತೆ ಪರಿತಪಿಸುತ್ತಿರುವ ಆ ಮೈಸೂರಿನ ಕಡೆಯ ‘ಪೇಟೆ ರೌಡಿ’ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನು ಕರೆಸಿಕೊಂಡು ಅಸಂಬದ್ಧ ಹೇಳಿಕೆ ನೀಡುತ್ತಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ” ಎಂದು ವ್ಯಂಗ್ಯವಾಡಿದ್ದಾರೆ.
ಪೋಲಿಸರ ನೈತಿಕ ಸ್ಥೈರ್ಯ ಕಸಿಯಲು ಬಿಡಲ್ಲ:
“ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಗೃಹ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಸೂಕ್ಷ್ಮ ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ. ಇಲಾಖೆಯ ಹಾಗೂ ಪೊಲೀಸರ ನೈತಿಕ ಸ್ಥೈರ್ಯ ಕಸಿಯಲು ನಾವು ಎಂದಿಗೂ ಬಿಡುವುದಿಲ್ಲ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Arakshakara Times Media
Related posts
