Share News

ಮೈಸೂರ್ : ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮರೆತುಬಂದಿದ್ದ ಬರೊಬ್ಬರಿ ₹5,00,000 ಹಣವಿದ್ದ ಬ್ಯಾಗ್‌ ಅನ್ನು ಸಾರ್ವಜನಿಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಕರುನಾಡಿನಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮೆರೆದಿದ್ದಾರೆ. ಚಾಲಕನ ಈ ಮಾದರಿ ನಡೆಯನ್ನು ಮೆಚ್ಚಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

​ಘಟನೆಯ ವಿವರ:

ದೂರುದಾರರು ವಿಜಯನಗರದ ‘ಝೂಡಿಯೋ’ (Zudio) ಮಳಿಗೆಯ ಮುಂದೆ ಆಟೋದಿಂದ ಇಳಿಯುವಾಗ ತಮ್ಮ 5 ಲಕ್ಷ ರೂಪಾಯಿ ನಗದಿದ್ದ ಬ್ಯಾಗ್ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ, ತಕ್ಷಣವೇ ಆ ಪ್ರಯಾಣಿಕರನ್ನು ಹುಡುಕಲು ಮುಂದಾಗಿದ್ದಾರೆ.

​ಅದೇ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಠಾಣೆಯ ಪೊಲೀಸರು, ವಿಷಯ ತಿಳಿಯುತ್ತಿದ್ದಂತೆ ಆಟೋ ಚಾಲಕ ಹಾಗೂ ಬ್ಯಾಗ್ ಕಳೆದುಕೊಂಡ ದೂರುದಾರರನ್ನು ಠಾಣೆಗೆ ಕರೆತಂದಿದ್ದಾರೆ. ಬಳಿಕ ಆಟೋ ಚಾಲಕನ ಹಸ್ತದಿಂದಲೇ ಪ್ರಯಾಣಿಕರಿಗೆ ಅವರ 5 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

​ಕಷ್ಟಪಟ್ಟು ದುಡಿಯುವ ವರ್ಗದಲ್ಲಿದ್ದರೂ, ಸಿಕ್ಕ ಅಪಾರ ಹಣದ ಆಸೆಗೆ ಬೀಳದೆ ತಕ್ಷಣವೇ ಹಣವನ್ನು ವಾಪಸ್ ಮಾಡಿದ ಆಟೋ ಚಾಲಕನ ನಿಸ್ವಾರ್ಥ ಸೇವೆಯನ್ನು ವಿಜಯನಗರ ಪೊಲೀಸರು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


Share News