Share News

ಆನೇಕಲ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಯುವಕನೊಬ್ಬನನ್ನು ಆನೇಕಲ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ ಅಂದಾಜು ₹40 ಲಕ್ಷದಿಂದ ₹50 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

​ಆನೇಕಲ್ ಪಟ್ಟಣದ ಪವನ್ ಅಲಿಯಾಸ್ ‘ತಿಕ್ಲು ಪವನ್’ (28) ಬಂಧಿತ ಆರೋಪಿ. ಈತನ ವಿರುದ್ಧ ಆನೇಕಲ್, ಬನ್ನೇರುಘಟ್ಟ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಸೇರಿದಂತೆ ಹಲವಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

​ಒಡಿಶಾದಿಂದ ಗಾಂಜಾ ಸರಬರಾಜು – ವಿಬಿಎಚ್‌ಸಿ ಬಳಿ ಬಂಧನ:

ಆರೋಪಿ ಪವನ್ ವಿಲಾಸಿ ಜೀವನ ನಡೆಸಲು ಒಡಿಶಾ ರಾಜ್ಯದಿಂದ ಗಾಂಜಾವನ್ನು ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದ. ಅದನ್ನು ಸ್ಥಳೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಸಿಕ್ಕ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಆನೇಕಲ್ ಪೊಲೀಸ್ , ಪಟ್ಟಣದ ವಿಬಿಎಚ್‌ಸಿ (VBHC) ಅಪಾರ್ಟ್‌ಮೆಂಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪವನ್‌ನನ್ನು ಜಪ್ತಿ ಮಾಡಿದ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.

​ಇದೇ ವೇಳೆ, ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ವಿಶ್ವವಿದ್ಯಾಲಯದ ಉಬೇದ್ ಹಾಗೂ ಜಾಫರ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.


Share News