ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ರೈತನಿಗೆ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೊಮ್ಮನಾಳಿನ ಲಿಖಿತ್ ಹಾಗೂ ಬಿಕ್ಕೋನಹಳ್ಳಿಯ ದೀಪು ಬಂಧಿತ ದರೋಡೆಕೋರರು. ಹೊಸನಗರ ತಾಲೂಕಿನ ಮತ್ತಲಿ ಜಡ್ಡು ಗ್ರಾಮದ ರೈತ ಸುಭಾಷ್ ದರೋಡೆಗೊಳಗಾದ ನಿರ್ಭಾಗ್ಯ ವ್ಯಕ್ತಿ.
ಘಟನೆಯ ವಿವರ:
ಆಗಸ್ಟ್ 14ರ ರಾತ್ರಿ ರೈತ ಸುಭಾಷ್ ಅವರು ಸವಳಂಗ ರಸ್ತೆಯ ಕೊಮ್ಮನಾಳು ಶಾಲೆಯ ಬಳಿ ಮೂತ್ರವಿಸರ್ಜನೆಗಾಗಿ ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಹಿಂಬದಿಯಿಂದ ದಿಢೀರನೆ ಬಂದ ಆರೋಪಿಗಳು, ಸುಭಾಷ್ ಅವರಿಗೆ ಚಾಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಬಳಿಕ ಅವರಿಂದ ₹2,000 ನಗದು ಹಾಗೂ ₹90,000 ಮೌಲ್ಯದ 6 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.
ಘಟನೆ ಕುರಿತು ಸುಭಾಷ್ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಇಬ್ಬರೂ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.