ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಬೈಕ್ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಬೈಕ್ ಮೇಲೆಯೇ ಟ್ಯಾಂಕರ್ ಹತ್ತಿಸಿದ ಚಾಲಕನನ್ನು ವೈಟ್ಫೀಲ್ಡ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವರ್ತೂರಿನ ಗುಂಜೂರು ಪಾಳ್ಯದ ಗುಂಡಿಬಿದ್ದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ಚಾಲಕ ನಿಯಂತ್ರಣವಿಲ್ಲದೆ ಅಪಾಯಕಾರಿಯಾಗಿ ಚಾಲನೆ ಮಾಡುತ್ತಾ ಎದುರಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದ ತಕ್ಷಣವೇ, ಆತನ ಬೈಕ್ ಮೇಲೆಯೇ ಚಾಲಕ ಟ್ಯಾಂಕರ್ ಹತ್ತಿಸಿದ್ದಾನೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಚಾಲಕ:
ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಬೆನ್ನಟ್ಟಿದ ಸಾರ್ವಜನಿಕರು ಆತನನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ವೈಟ್ಫೀಲ್ಡ್ ಸಂಚಾರ ಪೊಲೀಸರಿಗೆ ಆತನನ್ನು ಹಸ್ತಾಂತರಿಸಿದ್ದಾರೆ.
ಪೋಲಿಸರು ಪರಿಶೀಲನೆ ನಡೆಸಿದಾಗ ಟ್ಯಾಂಕರ್ಗೆ ನಂಬರ್ ಪ್ಲೇಟ್ ಕೂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೈಟ್ಫೀಲ್ಡ್ ಸಂಚಾರ ಪೊಲೀಸರು ಟ್ಯಾಂಕರ್ ವಶಕ್ಕೆ ಪಡೆದು, ಆರೋಪಿ ಚಾಲಕನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
Arakshakara Times Media
Related posts
