ತುಮಕೂರು: ಜಮೀನಿನಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸತ್ತಿದ್ದ ಚಿರತೆಯನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುಟ್ಟು ಹಾಕಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಂಧಿತರನ್ನು ಗೌರಗೊಂಡನಹಳ್ಳಿಯ ನಾರಾಯಣಪ್ಪ, ಶಿವಕುಮಾರ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಬನ್ನೇರುಘಟ್ಟ ತಂಡದಿಂದ ಪೋಸ್ಟ್‌ಮಾರ್ಟಮ್:
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅರಣ್ಯ ಇಲಾಖೆ, ಉಪ ವಲಯ ಅರಣ್ಯ ಕಚೇರಿಯ ಆವರಣದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿದ ವಿಶೇಷ ಪಶುವೈದ್ಯಕೀಯ ತಂಡವು ಪೋಸ್ಟ್‌ಮಾರ್ಟಮ್ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಚಿರತೆಯ ಸತ್ಯಾಸತ್ಯತೆ ಮತ್ತು ಸಾವಿಗೆ ನಿಖರ ಕಾರಣ ತಿಳಿಯಲು ದೇಹದ ಮಾದರಿ ಹಾಗೂ ಭಾಗಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆಯನ್ನು ತೀವ್ರಗೊಳಿಸಿದ್ದಾರೆ.