ತುಮಕೂರು: ಪ್ರಾಣಿಯೊಂದು ಮಾಡಿದ ಕಿಡಿಗೇಡಿತನಕ್ಕೆ ದಾರಿಹೋಕ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ತುಮಕೂರು ನಗರದ ಮಾರುತಿ ನಗರದಲ್ಲಿ ನಡೆದಿದೆ. ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಕೋತಿಯೊಂದು ಕೀಟಲೆ ಮಾಡಿದ ಪರಿಣಾಮ, ಕೆರಳಿದ ಜೇನುನೊಣಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಒಬ್ಬರ ಸಾವಿಗೆ ಕಾರಣವಾಗಿವೆ.
ನೃಪತುಂಗ ಬಡಾವಣೆಯ ನಿವಾಸಿ ವಿಜಯ್ ಪ್ರಕಾಶ್ (65) ಮೃತಪಟ್ಟ ದುರ್ದೈವಿ. ಇವರು ನಗರದ ಸುಜುಕಿ ಶೋರೂಂನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ (ಮಾ. 20) ಸಂಜೆ ಕೆಲಸ ಮುಗಿಸಿ ತಮ್ಮ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಮಾರುತಿ ನಗರದ ಪಿಎಂಟಿ ಕ್ವಾರ್ಟರ್ಸ್ ಬಳಿ ಈ ಘಟನೆ ಸಂಭವಿಸಿದೆ.
ರಸ್ತೆಯ ಪಕ್ಕದ ಮರದಲ್ಲಿದ್ದ ಬೃಹತ್ ಹೆಜ್ಜೇನು ಗೂಡಿಗೆ ಕೋತಿಯೊಂದು ಕಲ್ಲು ಎಸೆದು ಅಥವಾ ಕೆಣಕಿ ಕೀಟಲೆ ಮಾಡಿತ್ತು ಎನ್ನಲಾಗಿದೆ. ಇದರಿಂದ ಕೆರಳಿದ ನೂರಾರು ಜೇನುನೊಣಗಳು ಏಕಾಏಕಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ದಾಳಿ ಇಟ್ಟಿವೆ.
ಬೈಕ್‌ನಲ್ಲಿ ಹೋಗುತ್ತಿದ್ದ ವಿಜಯ್ ಪ್ರಕಾಶ್ ಅವರ ಮೇಲೆ ಜೇನುನೊಣಗಳು ಮುತ್ತಿಗೆ ಹಾಕಿದಾಗ, ಅವರು ಗಾಬರಿಗೊಂಡು ಬೈಕ್ ನಿಲ್ಲಿಸಿ ತಮ್ಮ ಶರ್ಟ್ ಬಿಚ್ಚಿ ನೊಣಗಳನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ನೂರಾರು ಜೇನುನೊಣಗಳು ಅವರ ಮುಖ, ಕುತ್ತಿಗೆ ಮತ್ತು ದೇಹದ ವಿವಿಧ ಭಾಗಗಳಿಗೆ ಮನಬಂದಂತೆ ಕಚ್ಚಿವೆ.
ದಾಳಿಯ ತೀವ್ರತೆ ಎಷ್ಟಿತ್ತೆಂದರೆ ವಿಜಯ್ ಪ್ರಕಾಶ್ ಅವರ ಮುಖದ ತುಂಬಾ ಜೇನುನೊಣಗಳ ವಿಷಪೂರಿತ ಮುಳ್ಳುಗಳು ಚುಚ್ಚಿಕೊಂಡಿದ್ದವು. ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇತರ ನಾಲ್ಕೈದು ಜನರ ಮೇಲೆಯೂ ಜೇನು ದಾಳಿ ಮಾಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತಮ್ಮದಲ್ಲದ ತಪ್ಪಿಗೆ ತಂದೆಯನ್ನು ಕಳೆದುಕೊಂಡ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. “ನನ್ನ ತಂದೆಗೆ ಬಂದ ಇಂತಹ ಪರಿಸ್ಥಿತಿ ಮತ್ತೆ ಯಾರಿಗೂ ಬರದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಇಂತಹ ಅಪಾಯಕಾರಿ ಜೇನುಗೂಡುಗಳನ್ನು ತೆರವುಗೊಳಿಸಬೇಕು” ಎಂದು ಅವರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ರಸ್ತೆ ಬದಿಯ ಮರಗಳಲ್ಲಿ ಜೇನುಗೂಡುಗಳಿದ್ದರೆ ಎಚ್ಚರಿಕೆ ವಹಿಸಿ. ಜೇನು ದಾಳಿ ನಡೆದಾಗ ಓಡುವುದಕ್ಕಿಂತ, ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಸುರಕ್ಷಿತ ಜಾಗದಲ್ಲಿ ಆಶ್ರಯ ಪಡೆಯುವುದು ಉತ್ತಮ.