Share News

ಮಂಗಳೂರು: ಕಾರಿನಲ್ಲಿ ದನಗಳ ಕಾಲು ಕಟ್ಟಿ ಅತ್ಯಂತ ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಜಪೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 8.42 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 18ರಂದು ಮುಂಜಾನೆ ಸುಮಾರು 4:45ರ ವೇಳೆಗೆ ಬಡಗ ಎಡಪದವು ಗ್ರಾಮದ ಸಸ್ತಾವು ಎಂಬಲ್ಲಿ ಫಾರ್ಚೂನರ್ ಕಾರಿನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಎ.ಸಿ.ಪಿ ಶ್ರೀಕಾಂತ್ ಮತ್ತು ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಲತಾ ಹಾಗೂ ಅವರ ತಂಡ ಮಿಂಚಿನ ದಾಳಿ ನಡೆಸಿದೆ.

ಪೊಲೀಸರು ದಾಳಿ ನಡೆಸಿದಾಗ ಮಾರುತಿ ಫಾರ್ಚೂನರ್ ಕಾರಿನಲ್ಲಿ ನಾಲ್ಕು ದನಗಳನ್ನು ಕಾಲು ಕಟ್ಟಿ ಕೂಡಿ ಹಾಕಿರುವುದು ಕಂಡುಬಂದಿದೆ. ಸ್ಥಳದಲ್ಲಿ ಪೊಲೀಸರು ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ:

ನಾಲ್ಕು ಜಾನುವಾರುಗಳು

ಫಾರ್ಚೂನರ್ ಕಾರು

ಒಂದು ತಲವಾರ್ ಮತ್ತು ಕಬ್ಬಿಣದ ರಾಡ್

ಜಪ್ತಿ ಮಾಡಲಾದ ಒಟ್ಟು ಸೊತ್ತುಗಳ ಮೌಲ್ಯ ₹8.42 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸಾರ್ ಮತ್ತು ಮೊಹಮ್ಮದ್ ಜಮಾಲುದ್ದೀನ್ ಎಂಬ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ಮನವಿ: ಸಾರ್ವಜನಿಕರು ತಮ್ಮ ಸುತ್ತಮುತ್ತ ಇಂತಹ ಅಕ್ರಮ ಜಾನುವಾರು ಸಾಗಾಟ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳು ಕೋರಿದ್ದಾರೆ.


Share News