Share News

ಕೆಜಿಎಫ್: “ತಾಕತ್ತಿದ್ದರೆ ಖಾಕಿ ಯೂನಿಫಾರ್ಮ್ ಬಿಚ್ಚಿ ಬಾ, ನಿನ್ನನ್ನು ನೋಡ್ಕೋತೀನಿ!” ಎಂದು ಮಗಳ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಕುಖ್ಯಾತ ರೌಡಿಶೀಟರ್ ಓಪನ್ ಚಾಲೆಂಜ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲೇ ಆವಾಜ್ ಹಾಕಿದ ರೌಡಿಶೀಟರ್‌ನನ್ನು ಪೊಲೀಸರು ಚರ್ಚ್‌ನಿಂದಲೇ ಬಿಗಿಯಾಗಿ ಬಂಧಿಸಿ, ಖಾಕಿ ಪವರ್ ಏನೆಂಬುದನ್ನು ತೋರಿಸಿದ್ದಾರೆ.

​ಕೆಜಿಎಫ್‌ನಿಂದ ಕಲಬುರಗಿಗೆ ಗಡಿಪಾರಾಗಿದ್ದ ಕುಖ್ಯಾತ ರೌಡಿಶೀಟರ್ ‘ಸ್ಪ್ಯಾನ್ಸಿ’ ಎಂಬಾತನೇ ಪೊಲೀಸರ ಮೇಲೆಯೇ ದರ್ಪ ತೋರಿಸಿ, ಸದ್ಯ ಕಟಾಕಟೆಗೆ ತಳ್ಳಲ್ಪಟ್ಟಿರುವ ಆರೋಪಿ.

ಕುಖ್ಯಾತ ರೌಡಿಶೀಟರ್ ಸ್ಪ್ಯಾನ್ಸಿಯನ್ನು ಈ ಹಿಂದೆ ಕೆಜಿಎಫ್‌ನಿಂದ ಕಲಬುರಗಿ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಇತ್ತೀಚೆಗೆ ತನ್ನ ಮಗಳ ಮದುವೆಗಾಗಿ ನ್ಯಾಯಾಲಯದಿಂದ 10 ದಿನಗಳ ಕಾಲ ಈತ ರಜೆ (ಪೆರೋಲ್) ಪಡೆದು ಬಂದಿದ್ದ ಎನ್ನಲಾಗಿದೆ. ಆದರೆ, ಈ ಅವಧಿಯಲ್ಲೇ ಬೆದರಿಕೆ ಪ್ರಕರಣವೊಂದರಲ್ಲಿ ಈತನ ಕೈವಾಡವಿರುವ ಬಗ್ಗೆ ಮಾಹಿತಿ ಪಡೆದ ಕೆಜಿಎಫ್‌ನ ಸಬ್ ಇನ್ಸ್‌ಪೆಕ್ಟರ್ (PSI) ಮಂಜುನಾಥ್ ಅವರು ಆರೋಪಿಯನ್ನು ಬಂಧಿಸಲು ತೆರಳಿದ್ದಾರೆ.

ಯೂನಿಫಾರ್ಮ್ ಬಿಚ್ಚಿ ಬಾ ಎಂದು ಅಹಂಕಾರ:

ಮದುವೆ ನಿಶ್ಚಿತಾರ್ಥ ಅಥವಾ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದ ಚರ್ಚ್‌ಗೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ರೊಚ್ಚಿಗೆದ್ದ ರೌಡಿಶೀಟರ್ ಸ್ಪ್ಯಾನ್ಸಿ, ಸಾರ್ವಜನಿಕರ ಮುಂದೆಯೇ ಪಿಎಸ್ಐ ಮಂಜುನಾಥ್ ಅವರಿಗೆ ಏಕವಚನದಲ್ಲಿ ನಿಂದಿಸಲು ಆರಂಭಿಸಿದ್ದಾನೆ. “ನಿನಗೆ ಇದೆಲ್ಲಾ ಸರ್ಕಾರ ಕೊಟ್ಟಿರೋ ಸೌಲಭ್ಯ (ಯೂನಿಫಾರ್ಮ್), ತಾಕತ್ತಿದ್ರೆ ಆ ಡ್ರೆಸ್ ಬಿಚ್ಚಿ ಬಾ ನೋಡ್ಕೋತೀನಿ” ಎಂದು ರೌಡಿ ಅಹಂಕಾರದಿಂದ ಗರ್ಜಿಸಿದ್ದಾನೆ.

ರೌಡಿಶೀಟರ್ ಸಾರ್ವಜನಿಕವಾಗಿ ಎಷ್ಟೇ ದರ್ಪ, ಅಸಭ್ಯ ವರ್ತನೆ ತೋರಿದರೂ ಜಗ್ಗದ ಪಿಎಸ್ಐ ಮಂಜುನಾಥ್ ಮತ್ತು ಸಿಬ್ಬಂದಿ, ಆತನ ಬೆದರಿಕೆಗೆ ಹೆದರದೆ ಚರ್ಚ್ ಆವರಣದಲ್ಲೇ ಆತನನ್ನು ಕಠಿಣವಾಗಿ ಸದೆಬಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕವಾಗಿ ಕಾನೂನು ರಕ್ಷಕರ ಮೇಲೆಯೇ ಕೈ ಮಾಡಲು ಬಂದ ರೌಡಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಕಾನೂನಿನ ಪಾಠ ಕಲಿಸಿದ್ದಾರೆ.

​ಸದ್ಯ ಆರೋಪಿಯ ವಿರುದ್ಧ ಸಾರ್ವಜನಿಕ ಶಾಂತಿ ಭಂಗ, ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವಬೆದರಿಕೆ ಒಡ್ಡಿದ ಆರೋಪದಡಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 


Share News