Share News

ಧರ್ಮಸ್ಥಳ: ಇಲ್ಲಿನ ಪ್ರಸಿದ್ಧ ಕ್ಷೇತ್ರಕ್ಕೆ ದೇವರ ದರ್ಶನಕ್ಕೆ ಬಂದಿದ್ದ ವೃದ್ಧೆಯೊಬ್ಬರಿಗೆ ಮತ್ತು ಬರಿಸುವ ಪಾನೀಯ ನೀಡಿ, ಸುಮಾರು ₹10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಆಘಾತಕಾರಿ ಘಟನೆ ಧರ್ಮಸ್ಥಳ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ನಡೆದಿದೆ.

​ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ನಿವಾಸಿಯಾದ ಪ್ರೇಮಾ ಕೆ. (70) ಎಂಬುವರೇ ದರೋಡೆಗೊಳಗಾದ ದುರ್ದೈವಿ ವೃದ್ಧೆಯಾಗಿದ್ದಾರೆ. ಇವರಿಂದ 112 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ₹7,000 ನಗದನ್ನು ಕಳವು ಮಾಡಲಾಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹10,00,700 ಎಂದು ಅಂದಾಜಿಸಲಾಗಿದೆ.

ಮೇ 25 ರಂದು ಮಧ್ಯಾಹ್ನ ಧರ್ಮಸ್ಥಳಕ್ಕೆ ಬಂದಿದ್ದ ಪ್ರೇಮಾ ಅವರು ದೇವರ ದರ್ಶನ ಮುಗಿಸಿದ್ದರು. ಅದೇ ದಿನ ರಾತ್ರಿ ವಾಪಾಸು ಬೆಂಗಳೂರಿಗೆ ಪ್ರಯಾಣಿಸುವ ಸಲುವಾಗಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದಲ್ಲಿರುವ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದರು. ಈ ವೇಳೆ ಇವರ ಬಳಿ ಬಂದು ಕುಳಿತ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿ ವಿಶ್ವಾಸ ಗಳಿಸಿದ್ದಾನೆ. ತದನಂತರ ತಾನು ತಂದಿದ್ದ ದೇವರ ಪ್ರಸಾದ ಹಾಗೂ ಕುಡಿಯಲು ಜ್ಯೂಸ್ ನೀಡಿದ್ದಾನೆ.

ಅಪರಿಚಿತನ ಮಾತನ್ನು ನಂಬಿದ ವೃದ್ಧೆ ಪ್ರೇಮಾ ಅವರು ಆತ ನೀಡಿದ ಜ್ಯೂಸ್ ಅನ್ನು ಸ್ವಲ್ಪ ಕುಡಿದಿದ್ದಾರೆ. ಆದರೆ, ಜ್ಯೂಸ್ ಕುಡಿದ ಕೆಲವೇ ನಿಮಿಷಗಳಲ್ಲಿ ಅವರು ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದಾರೆ. ವೃದ್ಧೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಆ ಕಿರಾತಕ, ಪ್ರೇಮಾ ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಬ್ಯಾಗ್‌ನಲ್ಲಿದ್ದ ನಗದು ಹಣವನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

​ಬಸ್‌ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಸ್ಥಳೀಯರು ತಕ್ಷಣವೇ ಗಮನಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೃದ್ಧೆ ಚೇತರಿಸಿಕೊಂಡಿದ್ದಾರೆ.

ಚೇತರಿಸಿಕೊಂಡ ವೃದ್ಧೆ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಯ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪೊಲೀಸರು ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

 


Share News