ಬೆಂಗಳೂರು: ಕೆ-ಪಾಪ್ (K-Pop) ಹಾಗೂ ಕೊರಿಯನ್ ಡ್ರಾಮಾಗಳ ಅತಿಯಾದ ಪ್ರಭಾವದಿಂದಾಗಿ 13 ವರ್ಷದ ಬಾಲಕಿಯೊಬ್ಬಳು ಕೊರಿಯಾಗೆ ತೆರಳುವ ಉದ್ದೇಶದಿಂದ ಮನೆ ಬಿಟ್ಟು ಬಂದಿದ್ದು, ಚಂದ್ರಾಲೇಔಟ್ ಪೊಲೀಸರು ಸಮಯಪ್ರಜ್ಞೆ ಮೆರೆದು ಆಕೆಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ಘಟನೆಯ ವಿವರ:
ಬೆಂಗಳೂರಿನ ಹೆಬ್ಬಗೋಡಿ ನಿವಾಸಿಯಾದ ಬಾಲಕಿಯು ಕೊರಿಯಾ ದೇಶಕ್ಕೆ ಹೋಗಬೇಕೆಂಬ ಉದ್ದೇಶದಿಂದ ಮನೆ ತೊರೆದು ಅತ್ತಿಗುಪ್ಪೆಗೆ ಬಂದಿದ್ದಳು. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಇಲ್ಲದೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆಕೆಯನ್ನು ಗಮನಿಸಿದ ಚಂದ್ರಾಲೇಔಟ್ ಠಾಣೆಯ ಎಎಸ್ಐ ದೇವರಾಜ್ ಅವರು ತಕ್ಷಣವೇ ಬಾಲಕಿಯನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ.
ವಿಚಾರಣೆ ವೇಳೆ ಬೆಳಕಿಗೆ ಬಂದ ಸತ್ಯ:
ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊರಿಯನ್ ಸಂಸ್ಕೃತಿಯ ಪ್ರಭಾವ ವ್ಯಕ್ತವಾಗಿದೆ. ರಾತ್ರಿ ವೇಳೆ ಪೋಷಕರ ಮೊಬೈಲ್ ಬಳಸಿ ಕೊರಿಯನ್ ಸಿನಿಮಾಗಳು ಹಾಗೂ ಹಾಡುಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದ ಈಕೆ, ತನ್ನ ಹಾವಭಾವ ಹಾಗೂ ವೇಷಭೂಷಣಗಳನ್ನೂ ಕೊರಿಯನ್ ಶೈಲಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಳು. ಅದೇ ಹುಚ್ಚಿನಲ್ಲಿ ಕೊರಿಯಾಗೆ ತೆರಳಲು ನಿರ್ಧರಿಸಿ ಮನೆ ಬಿಟ್ಟಿರುವುದಾಗಿ ತಿಳಿದುಬಂದಿದೆ.
ಪೊಲೀಸರು ಬಾಲಕಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಿ, ಮನವೊಲಿಸಿ ಸುರಕ್ಷಿತವಾಗಿ ಪೋಷಕರ ವಶಕ್ಕೆ ಹಸ್ತಾಂತರಿಸಿದ್ದಾರೆ.
ಪೋಷಕರಿಗೆ ಎಚ್ಚರಿಕೆಯ ಕರೆಗಂಟೆ:
ಈ ಘಟನೆಯು ಪ್ರತಿಯೊಬ್ಬ ಪೋಷಕರಿಗೂ ಕಣ್ಣು ತೆರೆಸುವಂತಿದ್ದು, ಮಕ್ಕಳು ಮೊಬೈಲ್ನಲ್ಲಿ ಏನೆಲ್ಲಾ ವೀಕ್ಷಿಸುತ್ತಿದ್ದಾರೆ ಹಾಗೂ ಆನ್ಲೈನ್ನಲ್ಲಿ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ನಿರಂತರ ಕಣ್ಣಿಡಬೇಕು. ಮೊಬೈಲ್ ಬಳಕೆಗೆ ಸೂಕ್ತ ಮಿತಿ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.
Arakshakara Times Media
Related posts
