Share News

ದೊಡ್ಡಬಳ್ಳಾಪುರ: ಇಲ್ಲಿನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರ ಉಡಾಫೆ ಉತ್ತರ ನೀಡಿ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರನ ದರ್ಪ ಹಾಗೂ ಅಧಿಕಾರಿಗಳ ಅಸಡ್ಡೆಯನ್ನು ಖಂಡಿಸಿ ಆಕ್ರೋಶಗೊಂಡ ವರ್ತಕರು ಎಪಿಎಂಸಿ ಕಚೇರಿ ಮುಂಭಾಗದಲ್ಲೇ ಧರಣಿ ನಡೆಸಿ ಪ್ರತಿಭಟಿಸಿದರು.

​ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಗ್ರಾಹಕರು, ವರ್ತಕರು ಹಾಗೂ ಸಾರ್ವಜನಿಕರು ಬಂದು ಹೋಗುತ್ತಾರೆ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ಮಾರುಕಟ್ಟೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಎಪಿಎಂಸಿ ಆಡಳಿತದ ಕರ್ತವ್ಯವಾಗಿದೆ. ಆದರೆ, ಇಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ ಎಂದು ವರ್ತಕರು ದೂರಿದ್ದಾರೆ.

ಪ್ರಸ್ತುತ ಮಾರುಕಟ್ಟೆ ಆವರಣದಲ್ಲಿ ಓವರ್ ಹೆಡ್ ಟ್ಯಾಂಕ್‌ನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ನಿಯಮಬಾಹಿರವಾಗಿ ರಸ್ತೆಯ ಮೇಲ್ಭಾಗದಲ್ಲೇ ಒಂದು ಅಡಿಯಷ್ಟು ಎತ್ತರಕ್ಕೆ ಪೈಪ್‌ಗಳನ್ನು ಹಾಕಲಾಗುತ್ತಿದೆ. “ಮಾರುಕಟ್ಟೆಗೆ ಪ್ರತಿದಿನ ಸುಮಾರು 40 ಟನ್‌ಗಳಷ್ಟು ಭಾರ ಹೊತ್ತ ದೊಡ್ಡ ವಾಹನಗಳು ಸಂಚರಿಸುತ್ತವೆ. ರಸ್ತೆಯ ಮೇಲೆಯೇ ಪೈಪ್‌ಲೈನ್ ಹಾಕುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುವುದಲ್ಲದೆ, ಪೈಪ್‌ಗಳು ತಕ್ಷಣವೇ ಒಡೆದು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತದೆ” ಎಂದು ಸ್ಥಳೀಯ ವರ್ತಕ ಅಶ್ವಥ್ ರೆಡ್ಡಿ ಆಪಾದಿಸಿದ್ದಾರೆ.

ಈ ಕಳಪೆ ಕಾಮಗಾರಿಯ ಕುರಿತು ಗುತ್ತಿಗೆದಾರನನ್ನು ಪ್ರಶ್ನಿಸಿದರೆ, ವರ್ತಕರಿಗೆ ಯಾವುದೇ ಗೌರವ ನೀಡದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. “ಅಧಿಕಾರಿಗಳಿಗೆ ಹೇಳ್ತಿಯಾ ಹೇಳಿಕೋ ಹೋಗು” ಎಂದು ಉಡಾಫೆ ಉತ್ತರ ನೀಡಿರುವುದಲ್ಲದೆ, ಪ್ರಶ್ನಿಸಿದ ವರ್ತಕರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿ ಧಮ್ಕಿ ಹಾಕಿದ್ದಾನೆ ಎಂದು ವರ್ತಕರು ಗಂಭೀರವಾಗಿ ಆರೋಪಿಸಿದ್ದಾರೆ. ಇಲ್ಲಿನ ಅಧಿಕಾರಿಗಳಿಗೂ ಕಳಪೆ ಕಾಮಗಾರಿ ತಡೆಯುವ ಯಾವುದೇ ಜವಾಬ್ದಾರಿ ಇದ್ದಂತೆ ಕಾಣುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಈ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ವರ್ತಕರಿಗೆ ನೀಡಬೇಕು. ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಎಪಿಎಂಸಿ ಅಧಿಕಾರಿಗಳು ಇತ್ತ ಗಮನಹರಿಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

​ಪ್ರತಿಭಟನೆಯಲ್ಲಿ ವರ್ತಕರುಗಳಾದ ಅಶ್ವಥ್ ರೆಡ್ಡಿ, ಹನುಮಂತರಾಜು ಟಿ.ಕೆ., ಶಿವಕುಮಾರ್, ಅರುಣ್, ಕೆಂಪೇಗೌಡ ಸೇರಿದಂತೆ ಮಾರುಕಟ್ಟೆಯ ಪ್ರಮುಖ ವರ್ತಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

 


Share News