Share News

ಬೆಂಗಳೂರು: ರಾಜ್ಯದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರು ಹಾಗೂ ಸಂಘಟನಾ ಒಕ್ಕೂಟಗಳ ವಿರುದ್ಧ ಸುಳ್ಳು ಎಫ್‌ಐಆರ್ (FIR) ದಾಖಲಿಸುತ್ತಿರುವ ಮತ್ತು ವಿನಾಕಾರಣ ಮಾನಸಿಕ ಕಿರುಕುಳ ನೀಡುತ್ತಿರುವ ಗಂಭೀರ ಇಲಾಖಾ ದೌರ್ಜನ್ಯಗಳ ವಿರುದ್ಧ ‘ಕರ್ನಾಟಕ ಭೀಮ್ ಸೇನೆ’ ತೀವ್ರ ಪ್ರತಿರೋಧ ಒಡ್ಡಿದೆ.

​ಈ ಕುರಿತು ಕರ್ನಾಟಕ ಭೀಮ್ ಸೇನೆಯ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರು ನಿನ್ನೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಯಾದ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರನ್ನು ಖುದ್ದಾಗಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.

ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಈ ಪ್ರಮುಖ ಭೇಟಿಯ ಸಂದರ್ಭದಲ್ಲಿ, ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಅವರು ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಅಧಿಕಾರ ದುರುಪಯೋಗದ ವಿವಿಧ ಪ್ರಕರಣಗಳನ್ನು ಪ್ರಸ್ತಾಪಿಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಚರ್ಚೆಯಲ್ಲಿ, ಸಾರ್ವಜನಿಕರನ್ನು ವಿನಾಕಾರಣ ಗುರಿಮಾಡಿ ಮಾನಸಿಕವಾಗಿ ಹಿಂಸಿಸುತ್ತಿರುವ ನಡೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಧಿಕಾರದ ಅಧಿಕಾರಿಗೆ ಮನವರಿಕೆ ಮಾಡಿಕೊಡಲಾಯಿತು.

ಕರ್ನಾಟಕ ಭೀಮ್ ಸೇನೆಯ ಸಮಾಜಮುಖಿ ಕಳಕಳಿ ಹಾಗೂ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿ ಮೋಹನ್ ಕುಮಾರ್ ದಾನಪ್ಪ ಅವರು, ಇಂತಹ ಅಕ್ರಮ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಅಧಿಕೃತವಾಗಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ಪ್ರಾಧಿಕಾರದ ಅಧಿಕಾರಿಗಳ ಸ್ಪಂದನೆ ನಮಗೆ ಜೈ ಭೀಮ್ ಸಿದ್ಧಾಂತದ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ. ಅಧಿಕಾರಿಗಳ ಸೂಚನೆಯ ಮೇರೆಗೆ, ರಾಜ್ಯದಲ್ಲಿ ನಡೆದಿರುವ ಪೊಲೀಸ್ ಅಧಿಕಾರ ದುರುಪಯೋಗದ ಎಲ್ಲಾ ವಿವರಗಳು ಮತ್ತು ಪೂರಕ ದಾಖಲಾತಿಗಳನ್ನು ಸದ್ಯದಲ್ಲೇ ಕ್ರೋಡೀಕರಿಸಿ, ಅಧಿಕೃತವಾಗಿ ಕಾನೂನು ಹೋರಾಟದ ದೂರು ದಾಖಲಿಸಲು ಭೀಮ್ ಸೇನೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ” ಎಂದು ಕರ್ನಾಟಕ ಭೀಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರು ತಿಳಿಸಿದ್ದಾರೆ.

​ಭೇಟಿಯ ನಂತರ ಭೀಮ್ ಸೇನೆಯ ಪದಾಧಿಕಾರಿಗಳು ಪ್ರಾಧಿಕಾರದ ಅಧಿಕಾರಿ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರೊಂದಿಗೆ ಸೌಹಾರ್ದಯುತವಾಗಿ ಫೋಟೋ ತೆಗೆದುಕೊಂಡರು.

 


Share News