Share News

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರ್ಮೋಡ ಹಾಗೂ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಭಾರತದ ರಾಜತಾಂತ್ರಿಕ ಚಾಣಾಕ್ಷತನ ಫಲ ನೀಡಿದೆ. ಕತಾರ್ ಮತ್ತು ಇರಾನ್ ಮೂಲದ ಅನಿಲ ಹಾಗೂ ತೈಲ ಹೊತ್ತ ಹಡಗುಗಳು ಭಾರತದತ್ತ ಮುಖ ಮಾಡಿದ್ದು, ಇಂದು ಮಂಗಳೂರು ಬಂದರಿಗೆ 26,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸುತ್ತಿರುವುದು ದೇಶಕ್ಕೆ ದೊಡ್ಡ ಸಮಾಧಾನ ತಂದಿದೆ.

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಸ್ಥಗಿತಗೊಂಡಿದ್ದವು. ಆದರೆ ಭಾರತ ಸರ್ಕಾರದ ಸತತ ಮಾತುಕತೆಯ ಫಲವಾಗಿ ಇರಾನ್ ಈಗಾಗಲೇ ನಾಲ್ಕು ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದೆ.

ಮುಂಬೈಗೆ ಕಚ್ಚಾ ತೈಲ ಹಡಗಿನ ಆಗಮನ.ಗುಜರಾತ್‌ನ ಮುಂದ್ರಾ ಬಂದರಿಗೆ ‘ಶಿವಾಲಿಕ್’ ಹಡಗು ಪ್ರವೇಶ.ಮುಂದ್ರಾದಲ್ಲಿ 20 ಸಾವಿರ ಟನ್ ಅನ್‌ಲೋಡ್ ಮಾಡಿದ ಬಳಿಕ, ಉಳಿದ 26 ಸಾವಿರ ಟನ್ ಎಲ್‌ಪಿಜಿಯೊಂದಿಗೆ ಶಿವಾಲಿಕ್ ಹಡಗು ಮಂಗಳೂರು ಬಂದರು ತಲುಪಲಿದೆ.

ಈ ಹಡಗುಗಳ ಮೂಲಕ ಒಟ್ಟು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಲಭ್ಯವಾಗಲಿದ್ದು, ತಜ್ಞರ ಪ್ರಕಾರ ಇದು ಇಡೀ ದೇಶದ ಕೇವಲ 2 ದಿನಗಳ ಅವಶ್ಯಕತೆಯನ್ನು ಮಾತ್ರ ಪೂರೈಸಬಲ್ಲದು.

ಜಲಸಂಧಿಯಲ್ಲಿ ಇನ್ನೂ 20ಕ್ಕೂ ಹೆಚ್ಚು ಭಾರತೀಯ ಹಡಗುಗಳು ಸಿಲುಕಿಕೊಂಡಿವೆ. ಯುದ್ಧದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತದಿಂದ ಔಷಧಿ ಮತ್ತು ವೈದ್ಯಕೀಯ ನೆರವು ಒದಗಿಸಿದರೆ ಉಳಿದ ಹಡಗುಗಳನ್ನು ಬಿಡುಗಡೆ ಮಾಡುವುದಾಗಿ ಇರಾನ್ ಪ್ರಸ್ತಾಪ ಮುಂದಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಹಾಗೂ ಪೂರೈಕೆ ವ್ಯತ್ಯಯದ ಭೀತಿಯ ನಡುವೆ, ಮಂಗಳೂರಿಗೆ ಅನಿಲ ಪೂರೈಕೆಯಾಗುತ್ತಿರುವುದು ರಾಜ್ಯದ ಜನತೆಗೆ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.


Share News