ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಂತರರಾಜ್ಯ ಬೈಕ್ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶ ಮೂಲದ ಪ್ರಸಾದ್ ಹಾಗೂ ಕೋಲಾರದ ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಇವರಿಬ್ಬರು ದೀರ್ಘಕಾಲದಿಂದ ಬೈಕ್ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ವಿವಿಧೆಡೆ ಬೈಕ್ಗಳನ್ನು ಕಳವು ಮಾಡಿ, ಅವುಗಳನ್ನು ಗ್ರಾಮೀಣ ಭಾಗದ ಮುಗ್ಧ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮೂಲಕ ಬಂದ ಹಣದಿಂದ ಆರೋಪಿಗಳು ಐಷಾರಾಮಿ ಜೀವನ ಹಾಗೂ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಇತ್ತೀಚೆಗೆ ದಾಖಲಾಗಿದ್ದ ಬೈಕ್ ಕಳವು ಪ್ರಕರಣವೊಂದನ್ನು ಬೆನ್ನತ್ತಿದ ಹೊಸಕೋಟೆ ಪೊಲೀಸರಿಗೆ ಈ ಬೃಹತ್ ಜಾಲದ ಸುಳಿವು ಸಿಕ್ಕಿತ್ತು. ಹೊಸಕೋಟೆ ಕ್ರೈಂ ಕಾನ್ಸ್ಟೇಬಲ್ ಗೋಪಾಲ್ ಅವರು ಈ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು 8 ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ 45ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಚಂದ್ರಕಾಂತ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ಗೋವಿಂದ್ ಅವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬೃಹತ್ ಪ್ರಮಾಣದ ಬೈಕ್ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಜೈಲಿಗಟ್ಟಿರುವ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ಘೋಷಿಸಲಾಗಿದೆ.
