Share News

ಬೆಂಗಳೂರು: ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆಯನ್ನು ಮುಂದೂಡುವ ಕುರಿತಾದ ಊಹಾಪೋಹಗಳಿಗೆ ರಾಜ್ಯ ಚುನಾವಣಾ ಆಯೋಗ ತೆರೆ ಎಳೆದಿದೆ. ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಐದು ನಗರಸಭೆಗಳಿಗೆ ಸಂಬಂಧಿಸಿದಂತೆ ಜೂನ್ 30, 2026ರ ಒಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಏಪ್ರಿಲ್ 18ರಂದು ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ.

ಪ್ರಸ್ತುತ ಏಪ್ರಿಲ್ 16ರಿಂದ ಮೇ 15ರವರೆಗೆ ಜನಗಣತಿ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಮೇ ಮತ್ತು ಜೂನ್ ತಿಂಗಳಲ್ಲಿ ಶೈಕ್ಷಣಿಕ ಪರೀಕ್ಷೆಗಳು ಇರುವುದರಿಂದ ಮಾನವ ಸಂಪನ್ಮೂಲ ಮತ್ತು ಲಾಜಿಸ್ಟಿಕ್ಸ್ ಒದಗಿಸುವಲ್ಲಿ ಸವಾಲುಗಳು ಎದುರಾಗಬಹುದು ಎಂದು ಸರ್ಕಾರ ಭಾವಿಸಿದೆ. ಈ ಕಾರಣಕ್ಕಾಗಿ ಚುನಾವಣಾ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸುವಂತೆ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ಆದರೆ, ಚುನಾವಣಾ ಆಯೋಗವು ಈ ವಿಚಾರದಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದು, “ಚುನಾವಣೆಯನ್ನು ಮುಂದೂಡುವಂತೆ ಅಥವಾ ಹೆಚ್ಚಿನ ಸಮಯಾವಕಾಶ ಕೋರಿ ಆಯೋಗವು ಯಾವುದೇ ಮನವಿ ಸಲ್ಲಿಸಿಲ್ಲ” ಎಂದು ತಿಳಿಸಿದೆ. ಈ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಆಯೋಗ, ನ್ಯಾಯಾಲಯ ನೀಡುವ ನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಲು ತಾವು ಸಂಪೂರ್ಣ ಸನ್ನದ್ಧರಾಗಿರುವುದಾಗಿ ತಿಳಿಸಿದೆ.

​ಇದರಿಂದಾಗಿ ಜಿಬಿಎ ಚುನಾವಣೆ ನಿಗದಿತ ಸಮಯದಲ್ಲೇ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

 


Share News