ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಬಳಸಿದರೆ ವಿಧಿಸಲಾಗುತ್ತಿದ್ದ 200 ರೂಪಾಯಿ ದಂಡವನ್ನು ಈಗ 1000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (COTPA) ಕರ್ನಾಟಕ ತಿದ್ದುಪಡಿ ಅಧಿನಿಯಮ 2024ರ ಅಡಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಲಂ 4ರ ಅನ್ವಯ ಯಾರೇ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ತಂಬಾಕು ಬಳಸಿದಲ್ಲಿ ಅವರಿಗೆ ಗರಿಷ್ಠ 1,000 ರೂಪಾಯಿಗಳವರೆಗೆ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ, ಹುಕ್ಕಾ ಬಾರ್ ನಡೆಸುವವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಕಲಂ 4ಎ ಉಲ್ಲಂಘಿಸಿ ಹುಕ್ಕಾ ಬಾರ್ ನಡೆಸುವ ವ್ಯಕ್ತಿಗೆ ಕನಿಷ್ಠ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು.
ಹೊಸ ನಿಯಮದ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ:
ವಯಸ್ಸಿನ ಮಿತಿ: 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಪರಾಧ.
ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ: ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗೆ ತಂಬಾಕು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಿಡಿ ಸಿಗರೇಟು ಮಾರಾಟ: ಸಿಗರೇಟುಗಳನ್ನು ಬಿಡಿಯಾಗಿ (Single stick) ಮಾರಾಟ ಮಾಡುವಂತಿಲ್ಲ. ಈ ಮೇಲಿನ ನಿಯಮಗಳನ್ನು ಉಲ್ಲಂಘಿಸುವ ಮಾರಾಟಗಾರರಿಗೆ 1,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಇಲಾಖೆ ಈ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿಯಮಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.