Share News

ರಾಯಚೂರು: ನಗರದ ಹನುಮಾನ್ ಟಾಕೀಸ್ ಬಳಿಯ ಕೊತ್ತಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಿರುವ ರಾಯಚೂರಿನ ನೇತಾಜಿ ನಗರ ಠಾಣೆ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಆಭರಣಗಳ ಸಮೇತ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

​ಶೇಖ್ ನಜೀರ್ ಎಂಬುವವರ ಪುತ್ರ ರಹೀಮ್ ಬಂಧಿತ ಖತರ್ನಾಕ್ ಆರೋಪಿಯಾಗಿದ್ದಾನೆ.

ಇತ್ತೀಚೆಗೆ ರಾಯಚೂರು ನಗರದ ಹನುಮಾನ್ ಟಾಕೀಸ್ ಸಮೀಪದ ಕೊತ್ತಪೇಟೆಯಲ್ಲಿರುವ ಮನೆಯೊಂದರ ಬೀಗ ಮುರಿದಿದ್ದ ಕಳ್ಳರು, ಒಳನುಗ್ಗಿ ಅಂದಾಜು ₹1.49 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದ್ದ ಈ ಹಗಲು ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ, ಶೀಘ್ರ ಪತ್ತೆಗೆ ವಿಶೇಷ ತಂಡವನ್ನು ರಚಿಸಿತ್ತು.

ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ ನೇತಾಜಿ ನಗರ ಪೊಲೀಸರು, ಖಚಿತ ಮಾಹಿತಿ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿ ರಹೀಮ್‌ನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಒಟ್ಟು ₹1.26 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ಯಶಸ್ವಿಯಾಗಿ ಜಪ್ತಿ ಮಾಡಿಕೊಂಡಿದ್ದಾರೆ.

ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಅತ್ಯಲ್ಪ ಅವಧಿಯಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸಿದ ಪಶ್ಚಿಮ ವಲಯ ಸಿಪಿಐ, ನೇತಾಜಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ (PI) ಹಾಗೂ ಇಡೀ ತನಿಖಾ ಸಿಬ್ಬಂದಿಗಳ ಅತ್ಯುತ್ತಮ ಕಾರ್ಯಕ್ಷಮತೆಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು (ASP) ಮತ್ತು ಡಿವೈಎಸ್‌ಪಿ (DySP) ಅವರು ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


Share News