ಬೆಂಗಳೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರನ್ನಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದು, ಅವರು ಬುಧವಾರದಂದು ಅಧಿಕಾರ ಸ್ವೀಕರಿಸಿದ್ದಾರೆ. ವಾರ್ತಾ ಇಲಾಖೆಯ ಜೊತೆಗೆ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಇವರಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮೂಲತಃ ಕೋಲಾರ ಜಿಲ್ಲೆಯವರಾದ ಎಂ.ಎನ್. ಅನುಚೇತ್ ಅವರು ತಾಂತ್ರಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಮುಗಿಸಿದ ಇವರು, 2008ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿ, 2009ರ ಬ್ಯಾಚ್ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ ಹಾಗೂ ಸಮರ್ಥ ಆಡಳಿತಕ್ಕಾಗಿ ಹೆಸರಾಗಿರುವ ಅನುಚೇತ್ ಅವರು, ಈ ಹಿಂದೆ ಕೈಗೊಂಡ ಅತ್ಯುತ್ತಮ ತನಿಖಾ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ “ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕ”ಕ್ಕೆ ಭಾಜನರಾಗಿದ್ದಾರೆ.
2011: ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ವೃತ್ತಿಜೀವನ ಆರಂಭ.
ತದನಂತರ ಸಿಐಡಿ (CID) ವಿಭಾಗದ ಎಸ್ಪಿ ಆಗಿ ಮತ್ತು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ (DCP Central) ಆಗಿ ಪ್ರಮುಖ ಜವಾಬ್ದಾರಿಗಳ ನಿರ್ವಹಣೆ.
ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ.
ಪ್ರಸ್ತುತ ಈ ಹುದ್ದೆಗೆ ಬರುವ ಮುನ್ನ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ (DIGP) ಆಗಿ ಕಾರ್ಯನಿರ್ವಹಣೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯವೈಖರಿಗೆ ಹೊಸ ವೇಗ ನೀಡಬಲ್ಲ ಸಾಮರ್ಥ್ಯ ಹೊಂದಿರುವ ನೂತನ ಆಯುಕ್ತರಾದ ಡಿಐಜಿ ಎಂ.ಎನ್. ಅನುಚೇತ್ ಅವರಿಗೆ ‘ಅರಕ್ಷಕರ ಟೈಮ್ಸ್ ಮೀಡಿಯಾ’ ವತಿಯಿಂದ ಹಾರ್ದಿಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.