Share News

ಬೇತಮಂಗಲ: “ಖಾಕಿ ಉಡುಪಿನೊಳಗೆ ಕೇವಲ ಅಧಿಕಾರ ಮಾತ್ರವಲ್ಲ, ಕರುಣೆಯೂ ಇರುತ್ತದೆ” ಎಂಬುದನ್ನು ಬೇತಮಂಗಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಶ್ರೀ ತ್ಯಾಗರಾಜು ಎಂ. ರವರು ತಮ್ಮ ಹೃದಯವಂತಿಕೆಯ ನಡವಳಿಕೆಯ ಮೂಲಕ ಸಾಬೀತುಪಡಿಸಿದ್ದಾರೆ. ಠಾಣೆಗೆ ಬಂದ ಅಶಕ್ತ ವೃದ್ಧೆಯೊಬ್ಬರ ಅಳಲನ್ನು ನೆಲದ ಮೇಲೆಯೇ ಕುಳಿತು ಆಲಿಸುವ ಮೂಲಕ ಇಡೀ ಪೊಲೀಸ್ ಇಲಾಖೆ ಹೆಮ್ಮೆ ಪಡುವಂತಹ ಜನಸ್ನೇಹಿ ಕಾರ್ಯ ಮಾಡಿದ್ದಾರೆ.

ಗೆನ್ನೆರಹಳ್ಳಿ ಗ್ರಾಮದ ಅಶಕ್ತ ವಯೋವೃದ್ಧೆಯೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬೇತಮಂಗಲ ಪೊಲೀಸ್ ಠಾಣೆಗೆ ಆಗಮಿಸಿದ್ದರು. ವೃದ್ಧೆಯ ಸ್ಥಿತಿಯನ್ನು ಕಂಡು ತಕ್ಷಣವೇ ಸ್ಪಂದಿಸಿದ ಪಿಎಸ್ಐ ತ್ಯಾಗರಾಜು ಅವರು, ತಮ್ಮ ಅಧಿಕಾರದ ಹಮ್ಮು-ಬಿಮ್ಮುಗಳನ್ನು ಬದಿಗಿಟ್ಟು, ಸ್ವತಃ ತಾವೇ ನೆಲದ ಮೇಲೆಯೇ ಕುಳಿತು ಆ ವೃದ್ಧೆಯ ದೂರನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದರು. ಅಧಿಕಾರಿಯ ಈ ನಡವಳಿಕೆ ಅಲ್ಲಿ ನೆರೆದಿದ್ದ ಸಾರ್ವಜನಿಕರ ಹೃದಯ ಮುಟ್ಟುವಂತಿತ್ತು.

ವೃದ್ಧೆಯ ಸಮಸ್ಯೆಯನ್ನು ಕೇಳಿ ಕೇವಲ ಸಾಂತ್ವನದ ಭರವಸೆ ನೀಡಲಷ್ಟೇ ಸೀಮಿತವಾಗದ ಪಿಎಸ್ಐ, ತಕ್ಷಣವೇ ಕಾರ್ಯಪ್ರವೃತ್ತರಾದರು. ತಮ್ಮ ಠಾಣೆಯ ಸಿಬ್ಬಂದಿಯನ್ನು ಸದ್ಯದಲ್ಲೇ ಗೆನ್ನೆರಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಟ್ಟು, ವೃದ್ಧೆಯ ಸಮಸ್ಯೆಯನ್ನು ಸ್ಥಳದಲ್ಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ.

ಸಾರ್ವಜನಿಕರೊಂದಿಗೆ ಕಠಿಣವಾಗಿ ವರ್ತಿಸುವ ಅಧಿಕಾರಿಗಳ ನಡುವೆ, ಬೇತಮಂಗಲ ಪಿಎಸ್ಐ ತ್ಯಾಗರಾಜು ಅವರ ಈ ಮಾನವೀಯ ಮತ್ತು ಜನಸ್ನೇಹಿ ನಡವಳಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. “ಪೊಲೀಸ್ ಎಂದರೆ ಕೇವಲ ಶಿಕ್ಷಿಸುವವರಲ್ಲ, ರಕ್ಷಿಸುವವರು” ಎಂಬುದಕ್ಕೆ ಸಾಕ್ಷಿಯಾಗಿ ನಿಂತ ಇಂತಹ ಅಧಿಕಾರಿಗಳು ಇಡೀ ಪೊಲೀಸ್ ಇಲಾಖೆಗೆ ಹೆಮ್ಮೆಯಾಗಿದ್ದಾರೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.


Share News