ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ ಕೌಟಂಬಿಕ ಕಲಹ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿದ್ದ ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಕರಾಳ ಮುಖ ಬಯಲಾಗಿದ್ದು, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈತನ ಪತ್ನಿ ಚೈತ್ರಾ ಹಾಗೂ ಆಕೆಯ ಪ್ರಿಯಕರ, ಮಂಜು (ಯಾನೆ ಟೀಪುಡಿ ಮಂಜು) ಸದ್ಯ ಕಂಬಿ ಎಣಿಸುತ್ತಿರುವ ಆರೋಪಿಗಳು.
ಪೊಲೀಸ್ ಮೂಲಗಳ ಪ್ರಕಾರ, ಚೈತ್ರಾ ಮತ್ತು ಮಂಜು ನಡುವೆ ಇದ್ದ ಅನೈತಿಕ ಸಂಬಂಧದ ವಿಷಯ ಪತಿ ಪರಶುರಾಮ್‌ಗೆ ತಿಳಿದಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ತೀವ್ರ ಗಲಾಟೆಗಳು ನಡೆಯುತ್ತಿದ್ದವು. ಮೇ 15ರ ರಾತ್ರಿ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರು ಜಗಳ ಆರಂಭವಾಗಿದೆ. ಈ ವಿಷಯ ತಿಳಿದು ತಕ್ಷಣವೇ ಮನೆಗೆ ಧಾವಿಸಿದ ಪ್ರಿಯಕರ ಮಂಜು, ಪರಶುರಾಮ್ ಜೊತೆ ಜಗಳಕ್ಕೆ ನಿಂತಿದ್ದಾನೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಪರಶುರಾಮ್ ಕುಡುಗೋಲು ಹಿಡಿದು ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಮಂಜು ತನ್ನ ಬಳಿಯಿದ್ದ ಚಾಕುವಿನಿಂದ ಆತನ ಮೇಲೆ ಮುಗಿಬಿದ್ದಿದ್ದಾನೆ. ಈ ರಕ್ತಸಿಕ್ತ ಸಂಘರ್ಷದಲ್ಲಿ ಮಂಜು ಚಾಕುವಿನಿಂದ ತೀವ್ರವಾಗಿ ಇರಿದ ಪರಿಣಾಮ, ಪರಶುರಾಮ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಕೊಲೆಯ ನಂತರ ಪತ್ನಿ ಚೈತ್ರಾ ತನ್ನ ಪ್ರಿಯಕರ ಮಂಜುನನ್ನು ಕಾನೂನಿನ ಮುಷ್ಟಿಯಿಂದ ಬಚಾವ್ ಮಾಡಲು ಹರಸಾಹಸ ಪಟ್ಟಿದ್ದಾಳೆ. ಆರಂಭದಲ್ಲಿ ಪೊಲೀಸರ ಮುಂದೆ ಇದೊಂದು ಕೇವಲ ಸಾಮಾನ್ಯ ಕೌಟಂಬಿಕ ಜಗಳ ಎಂದು ನಂಬಿಸಿ, ಇಡೀ ಕೃತ್ಯವನ್ನು ಮುಚ್ಚಿಹಾಕಲು ವ್ಯವಸ್ಥಿತ ಸಂಚು ರೂಪಿಸಿದ್ದಾಳೆ.
ಆದರೆ, ಘಟನೆಯ ಹಿನ್ನೆಲೆಯ ಬಗ್ಗೆ ಅನುಮಾನಗೊಂಡ ಸಾಗರ ಟೌನ್ ಪೊಲೀಸರು ತೀವ್ರ ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಇವರಿಬ್ಬರ ಅಕ್ರಮ ಸಂಬಂಧದ ಅಸಲಿ ಸತ್ಯ ಹೊರಬಿದ್ದಿದೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೇ 26 ರಂದು ಪೊಲೀಸ್ ಇಲಾಖೆ ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದೆ.