Share News

ಬೆಂಗಳೂರು: ತಂಬಾಕು ಹಾಗೂ ಅಡಿಕೆ ಉತ್ಪನ್ನಗಳಲ್ಲಿ ಕಿಂಚಿತ್ ಅಮಲು ಪದಾರ್ಥ ಬೆರೆಸಿರುವುದು ಕಂಡುಬಂದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

​ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾನ್ ಮಸಾಲಾ, ಗುಟ್ಕಾ, ಅಡಿಕೆ ಮತ್ತಿತರ ಪದಾರ್ಥಗಳಲ್ಲಿ ಅಮಲು ಬರುವಂತಹ ವಿಷಕಾರಿ ವಸ್ತುಗಳನ್ನು ಬೆರಕೆ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕೃತ್ಯ ತಕ್ಷಣವೇ ನಿಲ್ಲದಿದ್ದರೆ ಮತ್ತು ಇದು ನಿಜವೆಂದು ಸಾಬೀತಾದರೆ, ರಾಜ್ಯಾದ್ಯಂತ ಎಲ್ಲ ಮಾದರಿಯ ಪಾನ್ ಮಸಾಲಾ ಹಾಗೂ ಗುಟ್ಕಾ ಪದಾರ್ಥಗಳ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು” ಎಂದು ಸಿಎಂ ಎಚ್ಚರಿಸಿದರು.

“ರಾಜ್ಯವನ್ನು ಮಾದಕದ್ರವ್ಯ ಮುಕ್ತ ಕರ್ನಾಟಕವನ್ನಾಗಿ ರೂಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯುವುದು ಇಂದಿನ ದೊಡ್ಡ ಸವಾಲಾಗಿದೆ. ನಾವೆಲ್ಲರೂ ಒಂದಾಗಿ ಸೇರಿ ಇದನ್ನು ತಡೆಯಬೇಕಿದೆ. ಜೀವ ರಕ್ಷಣೆ ಮಾಡುವ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ನೀವೆಲ್ಲರೂ ಈ ಅಭಿಯಾನದ ರಾಯಭಾರಿಗಳಾಗಬೇಕು” ಎಂದು ಕಾರ್ಯಕ್ರಮದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಸಿಎಂ, “ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಆರಂಭಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ಕಾಲೇಜುಗಳಿಲ್ಲ. ಕರ್ನಾಟಕ ದೇಶದ ವೈದ್ಯಕೀಯ ರಾಜಧಾನಿಯಾಗಿದೆ. ಶೀಘ್ರದಲ್ಲೇ ಈ ವಿವಿಯು ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್‌ಗೆ ಸ್ಥಳಾಂತರವಾಗಲಿದೆ” ಎಂದು ಮಾಹಿತಿ ನೀಡಿದರು.

 


Share News