Share News

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆಗಳು ಸಾರ್ವಜನಿಕರ ಓಡಾಟಕ್ಕಿವೆಯೋ ಅಥವಾ ಮನೆ ಮಾಲೀಕರ ಹಾಗೂ ಬಾಡಿಗೆದಾರರ ವಾಹನಗಳ ಪಾರ್ಕಿಂಗ್‌ಗೆ ಇವೆಯೋ ಎಂಬ ಸಾರ್ವಜನಿಕ ಪ್ರಶ್ನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಮೂರ್ನಾಲ್ಕು ಅಂತಸ್ತಿನ ಭವ್ಯ ಕಟ್ಟಡಗಳನ್ನು ಕಟ್ಟಿ, ಲಕ್ಷಾಂತರ ರೂಪಾಯಿ ಬಾಡಿಗೆ ಆದಾಯ ಗಳಿಸುವ ಮನೆ ಮಾಲೀಕರು, ಕನಿಷ್ಠ ಪಾರ್ಕಿಂಗ್ ಜಾಗವನ್ನೂ ಬಿಡದೆ ಸಾರ್ವಜನಿಕ ರಸ್ತೆಗಳನ್ನೇ ತಮ್ಮ ‘ಸ್ವಂತ ಪಾರ್ಕಿಂಗ್ ತಾಣ’ಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯಲ್ಲೇ ಮಾಲೀಕರು ಮತ್ತು ಟೆನೆಂಟ್‌ಗಳ ವಾಹನ ವೈಭವ!

ನಗರದಲ್ಲಿ ಕಿರಿದಾದ ರಸ್ತೆಗಳ ಪಕ್ಕದಲ್ಲೇ ನಿಯಮ ಬಾಹಿರವಾಗಿ ಬಹುಮಹಡಿ ಕಟ್ಟಡಗಳನ್ನು ತಲೆ ಎತ್ತಲಾಗುತ್ತಿದೆ. ಆದರೆ, ಈ ಕಟ್ಟಡಗಳಲ್ಲಿ ಸ್ವಂತ ವಾಹನಗಳಿಗಾಗಲಿ ಅಥವಾ ಬಾಡಿಗೆಗೆ ಬರುವ ಟೆನೆಂಟ್‌ಗಳ ವಾಹನಗಳಿಗಾಗಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಪರಿಣಾಮವಾಗಿ, ಮಾಲೀಕರ ಕಾರು-ಬೈಕ್‌ಗಳು ಮಾತ್ರವಲ್ಲದೆ, ಬಾಡಿಗೆದಾರರ ಹತ್ತಾರು ವಾಹನಗಳೂ ರಸ್ತೆಯ ಇಕ್ಕೆಲಗಳಲ್ಲೇ ಸಾಲಾಗಿ ನಿಲ್ಲುತ್ತಿವೆ. ಇದರಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದ್ದು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ (BBMP) ಬೈಲಾ ನಿಯಮಗಳ ಪ್ರಕಾರ, ಯಾವುದೇ ವಸತಿ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಿಸುವಾಗ ಆ ಕಟ್ಟಡದ ವಿಸ್ತೀರ್ಣಕ್ಕೆ ತಕ್ಕಂತೆ ಕಡ್ಡಾಯವಾಗಿ ಬೇಸ್‌ಮೆಂಟ್ ಅಥವಾ ಸ್ಟಿಲ್ಟ್ ಪಾರ್ಕಿಂಗ್ (Stilt Parking) ವ್ಯವಸ್ಥೆಯನ್ನು ಕಲ್ಪಿಸಬೇಕು. ಮನೆಗೆ ಬರುವವರ ವಾಹನಗಳ ನಿಲುಗಡೆಗೆ ಜಾಗ ಒದಗಿಸುವುದು ಕಟ್ಟಡ ಮಾಲೀಕರ ಕಾನೂನಾತ್ಮಕ ಜವಾಬ್ದಾರಿಯಾಗಿದೆ. ಪಾರ್ಕಿಂಗ್ ಜಾಗ ಬಿಡದೆ ಕಟ್ಟಡ ನಕ್ಷೆ (Plan) ಮಂಜೂರಾತಿ ಪಡೆಯುವುದು ಮತ್ತು ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ.

ಬೀದಿ ವ್ಯಾಪಾರಿಗಳಿಗೊಂದು ನ್ಯಾಯ, ಶ್ರೀಮಂತ ಮಾಲೀಕರಿಗೊಂದು ನ್ಯಾಯವೇ?

ಪಾದಚಾರಿ ರಸ್ತೆಗಳನ್ನು ಅತಿಕ್ರಮಿಸಿದ್ದಾರೆ ಎಂಬ ಕಾರಣಕ್ಕೆ ಬಡ ಬೀದಿ ಬದಿ ವ್ಯಾಪಾರಿಗಳ ಮೇಲೆ ಮುಗಿಬೀಳುವ ಬಿಬಿಎಂಪಿ ಮತ್ತು ಸಂಚಾರಿ ಪೊಲೀಸ್ ಇಲಾಖೆ, ರಸ್ತೆಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಇಂತಹ ಶ್ರೀಮಂತ ಮನೆ ಮಾಲೀಕರ ವಿರುದ್ಧ ಏಕೆ ಮೌನ ವಹಿಸಿದೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಬಡವರ ಹೊಟ್ಟೆಪಾಡಿನ ವ್ಯಾಪಾರವನ್ನು ತೆರವುಗೊಳಿಸುವ ಮಾದರಿಯಲ್ಲೇ, ಸಾರ್ವಜನಿಕ ಸಂಚಾರಕ್ಕೆ ಕಂಟಕವಾಗಿರುವ ರಸ್ತೆಯ ಮೇಲಿನ ಇಂತಹ ವಾಹನಗಳನ್ನು ಒಂದನ್ನೂ ಬಿಡದಂತೆ ಮುಲಾಜಿಲ್ಲದೆ ತೆರವುಗೊಳಿಸಬೇಕಲ್ಲವೇ? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪಾರ್ಕಿಂಗ್ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿರುವ ಮಾಲೀಕರಿಗೆ ಭಾರಿ ದಂಡ ವಿಧಿಸಬೇಕು. ಜೊತೆಗೆ ರಸ್ತೆಯನ್ನು ಅತಿಕ್ರಮಿಸಿ ನಿಲ್ಲಿಸುವ ವಾಹನಗಳನ್ನು ಜಪ್ತಿ ಮಾಡುವ ಮೂಲಕ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಕಠಿಣ ಸಂದೇಶ ರವಾನಿಸಬೇಕಿದೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು; ಬಾಡಿಗೆ ಹಣದ ಆಸೆಗೆ ಸಾರ್ವಜನಿಕರ ನೆಮ್ಮದಿ ಕೆಡಿಸುವವರ ವಿರುದ್ಧ ತಕ್ಷಣವೇ ಜಂಟಿ ಕಾರ್ಯಾಚರಣೆ ಆರಂಭವಾಗಬೇಕಿದೆ.

 


Share News