Share News

ಗುಂಡ್ಲುಪೇಟೆ: ತಾಲೂಕಿನ ದೇಶಿಪುರ ಗ್ರಾಮದಲ್ಲಿ ಮಾನವೀಯತೆ ಮರೆತ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಕನೇ ಆದ 46 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ, ಬಾಲಕಿ ಅಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ದೇಶಿಪುರ ಗ್ರಾಮದ ಬಾಲಕಿಗೆ ಕಳೆದ ಮೂರು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದನ್ನು ಸಾಮಾನ್ಯ ನೋವು ಎಂದು ಭಾವಿಸಿದ ಪೋಷಕರು ಆಕೆಯನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ ಇರುವುದನ್ನು ದೃಢಪಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ರವಾನಿಸಿದರು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆ ಅಂಬುಲೆನ್ಸ್‌ನಲ್ಲೇ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆರಿಗೆಯ ನಂತರ ವಿಷಯ ತಿಳಿದು ದಿಗ್ಭ್ರಾಂತರಾದ ಪೋಷಕರು ಮಗುವಿನ ತಂದೆ ಯಾರು ಎಂದು ಪ್ರಶ್ನಿಸಿದಾಗ, ಬಾಲಕಿ ಸುರೇಶ್ (46) ಎಂಬಾತನ ಕೃತ್ಯವನ್ನು ಬಯಲು ಮಾಡಿದ್ದಾಳೆ. ಗ್ರಾಮದ ನಿವಾಸಿಯೂ, ಸಂಬಂಧಿಯೂ ಆಗಿರುವ ಈತ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎಂದು ಆಕೆ ನೋವು ತೋಡಿಕೊಂಡಿದ್ದಾಳೆ.

ತನ್ನ ಮಗಳ ಪ್ರಾಯದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಸುರೇಶ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಾಲಕಿಯ ತಂದೆ ನೀಡಿದ ದೂರಿನನ್ವಯ ಬೇಗೂರು ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಸುರೇಶ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುರೇಶ್ (46 ವರ್ಷ), ದೇಶಿಪುರ ಗ್ರಾಮ.

ಸಂತ್ರಸ್ತೆ: 17 ವರ್ಷದ ಅಪ್ರಾಪ್ತ ಬಾಲಕಿ.

ಪ್ರಕರಣ: ಪೋಕ್ಸೋ ಕಾಯ್ದೆಯಡಿ ತನಿಖೆ ಪ್ರಗತಿಯಲ್ಲಿದೆ.

ಪ್ರಸ್ತುತ ತಾಯಿ ಮತ್ತು ಮಗು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟು ದಿನಗಳ ಕಾಲ ಗರ್ಭಧಾರಣೆಯ ವಿಷಯ ಪೋಷಕರಿಗೆ ತಿಳಿಯದಂತೆ ಆರೋಪಿ ಹೇಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


Share News