ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓಡಿಸ್ಸಾ ಮೂಲದ ಅಂತರರಾಜ್ಯ ಪೆಡ್ಲರ್ನನ್ನು ಬೇಗೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5,00,000 ರೂ. ಮೌಲ್ಯದ 10 ಕೆಜಿ ತೂಕದ ನಿಷೇಧಿತ ಗಾಂಜಾ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಓಡಿಸ್ಸಾದ ಗಂಜಂ ಜಿಲ್ಲೆಯ ಲಂಡಜುವಲಿ ಗ್ರಾಮದ ಬಲರಾಮ ಬೇಹ್ರಾ (27) ಬಂಧಿತ ಆರೋಪಿ.
ಘಟನೆಯ ವಿವರ ಹಾಗೂ ದಾಳಿ:
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಟಸಂದ್ರ ಬೋಳಗುಡ್ಡ ರಸ್ತೆಯ ಅರಟ್ಟಾ ವಿವೇರಾ ಅಪಾರ್ಟ್ಮೆಂಟ್ ಬಳಿಯ ಖಾಲಿ ಜಾಗದಲ್ಲಿ ಆರೋಪಿಯು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಹೆಚ್ಸಿ ಹರಿನಾಥ್ (ಹೆಚ್ಸಿ-11227) ಹಾಗೂ ಸಿಬ್ಬಂದಿಗೆ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿ ಆಧರಿಸಿ ಬೇಗೂರು ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ (ಕ್ರೈಂ ನಂ: 247/2026) ದಾಖಲಿಸಿಕೊಂಡ ಪೊಲೀಸರು, ಮೇಲಾಧಿಕಾರಿಗಳ ಅನುಮತಿಯೊಂದಿಗೆ ದಿನಾಂಕ 07.08.2026 ರಂದು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಯನ್ನು ಸುತ್ತುವರಿದು, ಆತನಿಂದ 5 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾ, ಒಂದು ಡಿಜಿಟಲ್ ತೂಕದ ಯಂತ್ರ (Weighing Machine) ಹಾಗೂ ಜಿಪ್ಲಾಕ್ ಕವರ್ಗಳನ್ನು ಮಹಜರ್ ನಡೆಸಿ ಜಪ್ತಿ ಮಾಡಿದ್ದಾರೆ.
ಓಡಿಸ್ಸಾದಿಂದ ಬಸ್ನಲ್ಲಿ ಗಾಂಜಾ ಸಾಗಾಟ:
ಬಂಧಿತ ಆರೋಪಿ ವೃತ್ತಿಯಲ್ಲಿ ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿದ್ದು, ಪ್ರಸ್ತುತ ಯಾವುದೇ ಕೆಲಸವಿಲ್ಲದೆ ಸುಲಭವಾಗಿ ಹಣ ಸಂಪಾದಿಸುವ ದುರುದ್ದೇಶ ಹೊಂದಿದ್ದ. ಓಡಿಸ್ಸಾದ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಥಳೀಯರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಬಸ್ ಮೂಲಕ ಬೆಂಗಳೂರಿಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಪೊಲೀಸ್ ತಂಡದ ಕಾರ್ಯಾಚರಣೆ:
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ನಾರಾಯಣ ಎಮ್, ಐ.ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶ್ರೀ ಕೆ.ಎಮ್. ಸತೀಶ ಅವರ ನೇತೃತ್ವದಲ್ಲಿ, ಬೇಗೂರು ಇನ್ಸ್ಪೆಕ್ಟರ್ ಶ್ರೀ ಸಂದೀಪ್ ಎಸ್, ಪಿಎಸ್ಐ ಶ್ರೀ ಮಹಾಂತೇಶ ಬಾರಕೇರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
Arakshakara Times Media
Related posts
