Share News

ಚಾಮರಾಜನಗರ: ರೈತನ ಮೇಲೆ ದಾಳಿ ನಡೆಸಿ ಕೊಂದು ತಿಂದಿದ್ದ ಭೀಕರ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದಿದ್ದಾರೆ. ಇದರಿಂದ ಕಳೆದ ಹಲವು ದಿನಗಳಿಂದ ಭಯದ ವಾತಾವರಣದಲ್ಲಿದ್ದ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ.

​ಚಾಮರಾಜನಗರ ತಾಲೂಕಿನ ತಾವರೆಕಟ್ಟೆ ಮೋಳೆ ಗ್ರಾಮದ ಮರಗದಕೆರೆ ಬಳಿ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಸಾಕಾನೆಗಳಾದ ಕಂಜನ್ ಮತ್ತು ಈಶ್ವರ್ ಸಹಾಯದಿಂದ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಬಂಧಿಸಿದ್ದಾರೆ. ಸೆರೆ ಸಿಕ್ಕ ವ್ಯಾಘ್ರವು ಗಂಡು ಹುಲಿಯಾಗಿದ್ದು, ಸುಮಾರು 6 ರಿಂದ 7 ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

​೧೨ ದಿನಗಳ ನಿರಂತರ ಕಾರ್ಯಾಚರಣೆ:

ಕಳೆದ ಸೆಪ್ಟೆಂಬರ್ 14 ರ ಸಂಜೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ರೈತ ಬಸವಣ್ಣ ಅವರ ಮೇಲೆ ಹುಲಿ ದಾಳಿ ನಡೆಸಿ ಭಕ್ಷಿಸಿತ್ತು. ಈ ಭೀಕರ ಘಟನೆಯ ಬೆನ್ನಲ್ಲೇ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಸೆಪ್ಟೆಂಬರ್ 15 ರಿಂದ ನಿರಂತರವಾಗಿ ಹುಲಿ ಸೆರೆಗಾಗಿ ಜಾಲ ಬೀಸಿದ್ದರು.

​೬೫ಕ್ಕೂ ಹೆಚ್ಚು ಸಿಬ್ಬಂದಿ ಶ್ರಮ:

ಹುಲಿ ಸೆರೆ ಕಾರ್ಯಾಚರಣೆಗಾಗಿ 2 ಡ್ರೋನ್ ಕ್ಯಾಮೆರಾಗಳು, ಶ್ವಾನದಳ ಹಾಗೂ ಹುಲಿ ಜಾಡು ಪತ್ತೆಹಚ್ಚುವಲ್ಲಿ ನುರಿತರಾದ 65 ಕ್ಕೂ ಹೆಚ್ಚು ಗಿರಿಜನರು ಮತ್ತು ಅರಣ್ಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ ಮಾಹಿತಿ ನೀಡಿದ್ದಾರೆ.


Share News