ರಾಯಚೂರು: ಜಿಲ್ಲೆಯ ಬಳಗಾನೂರು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬೈಕ್ ಕಳ್ಳತನದ ಬೃಹತ್ ಸಂಘಟಿತ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 35.20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 50 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಖತರ್ನಾಕ್ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ರಫೀಕ್ ವಿರುಪಾಪೂರು, ಚನ್ನಬಸವ ಹೂಗಾರ, ರಾಘವೇಂದ್ರ ಅಲಿಯಾಸ್ ಗಿಂಡಿರಾಘು, ಮೈಹೆಬೂಬ್ (ಮಸ್ಕಿ) ಹಾಗೂ ಮಹಮ್ಮದ್ ಲಾಲ್ (ಪರಾಪೂರು) ಎಂದು ಗುರುತಿಸಲಾಗಿದೆ.
ನಾಲ್ಕು ತಿಂಗಳ ಹಿಂದೆ ಹನುಮಾನ್ ರಂಗಗೌಡ ಎಂಬುವವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಕಳ್ಳತನವಾಗಿರುವ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಬುಲೆಟ್ ಬೈಕ್ ಹುಡುಕಾಟ ನಡೆಸುವ ಹಾದಿಯಲ್ಲಿ ಪೊಲೀಸರಿಗೆ ಇತರೆ ಕಳ್ಳತನದ ಬೈಕ್‌ಗಳ ದೊಡ್ಡ ಸುಳಿವೇ ಸಿಕ್ಕಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಕಳ್ಳತನದ ಬೈಕ್‌ಗಳ ಸುಳಿವು ಬೆನ್ನತ್ತಿದ ಪೊಲೀಸ್ ವಿಶೇಷ ತಂಡವು ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿತು. ಈ ವೇಳೆ ಕಳ್ಳತನದ ಬೈಕ್‌ಗಳನ್ನು ಹೊಂದಿದ್ದ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಇಡೀ ಜಾಲದ ಕಿಂಗ್‌ಪಿನ್ ರಫೀಕ್ ವಿರುಪಾಪೂರು ಎಂಬಾತನ ಹೆಸರು ಬೆಳಕಿಗೆ ಬಂದಿದೆ. ತಕ್ಷಣವೇ ರಫೀಕ್‌ನನ್ನು ವಶಕ್ಕೆ ಪಡೆದು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ 50 ಬೈಕ್‌ಗಳನ್ನು ಕದ್ದಿರುವ ಸಂಘಟಿತ ಜಾಲದ ಅಸಲಿ ಕಥೆ ಬಿಚ್ಚಿಟ್ಟಿದ್ದಾನೆ.
ಈ ಭರ್ಜರಿ ಕಾರ್ಯಾಚರಣೆಯ ಮೂಲಕ ಮಸ್ಕಿ, ಸಿಂಧನೂರು ಗ್ರಾಮೀಣ, ಹಟ್ಟಿ, ಲಿಂಗಸೂಗೂರು ಹಾಗೂ ರಾಯಚೂರು ಸೇರಿದಂತೆ ಜಿಲ್ಲೆಯ ಐದಾರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಹತ್ತಾರು ಬೈಕ್ ಕಳ್ಳತನ ಪ್ರಕರಣಗಳು ಸುಲಭವಾಗಿ ಇತ್ಯರ್ಥಗೊಂಡಿವೆ.
ಕೇವಲ ನಾಲ್ಕು ತಿಂಗಳ ಅಲ್ಪಾವಧಿಯಲ್ಲೇ ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ, 50 ಬೈಕ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಬಳಗಾನೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಾರ್ಹ ಸಾಧನೆಯನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ (SP) ಅರುಣಾಂಗ್ಷು ಗಿರಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ ಯಶಸ್ವಿ ಕಾರ್ಯಾಚರಣೆ ನಡೆಸಿದ ಇಡೀ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.