Share News

ಬೆಂಗಳೂರು: ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಬೈಕ್ ಸವಾರನೊಬ್ಬನಿಗೆ ದಂಡ ವಿಧಿಸಲು ಹೋಗಿ, ಸಂಚಾರಿ ಪೊಲೀಸರು ಬೆನ್ನ ಮೇಲಿದ್ದ ಗಿಟಾರ್ ಬ್ಯಾಗ್‌ಗೇ ₹500 ದಂಡ ಹಾಕಿರುವ ವಿಚಿತ್ರ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

​ಬೈಕ್ ಸವಾರ ಸೌವಿಕ್ ದತ್ತ ಎಂಬುವವರಿಗೆ ಈ ಅಪರೂಪದ ಹಾಗೂ ವಿಚಿತ್ರ ದಂಡದ ಚಲನ್ ತಲುಪಿದೆ.

​ಕ್ಯಾಮೆರಾ ಕಣ್ಣಿಗೆ ಗಿಟಾರ್ ಬ್ಯಾಗೇ ಸವಾರ!

ಸೌವಿಕ್ ದತ್ತ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೆನ್ನಿಗೆ ಗಿಟಾರ್ ಬ್ಯಾಗ್ ಧರಿಸಿದ್ದರು. ಆದರೆ, ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗಿನ ಟ್ರಾಫಿಕ್ ಸಿಗ್ನಲ್‌ ಬಳಿ ಅಳವಡಿಸಲಾಗಿದ್ದ ಎಐ/ಸಂಚಾರಿ ಕ್ಯಾಮೆರಾ, ಬೆನ್ನಿನ ಮೇಲಿದ್ದ ಗಿಟಾರ್ ಬ್ಯಾಗ್‌ನ್ನೇ ಹಿಂಬದಿ ಕುಳಿತಿರುವ ಸವಾರ ಎಂದು ತಪ್ಪಾಗಿ ಗುರುತಿಸಿದೆ. ಅಷ್ಟೇ ಅಲ್ಲದೆ, ಆ ‘ಸವಾರ’ ಹೆಲ್ಮೆಟ್ ಧರಿಸಿಲ್ಲವೆಂದು ಪರಿಗಣಿಸಿ ₹500 ದಂಡದ ಚಲನ್‌ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

​ಸಂಚಾರಿ ಇಲಾಖೆಯ ತಾಂತ್ರಿಕ ಲೋಪ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವ್ಯಂಗ್ಯ ಹಾಗೂ ಆಕ್ರೋಶ ವ್ಯಕ್ತವಾಗಿದ್ದು, ಚಲನ್ ಪರಿಶೀಲಿಸದೆ ಅಪ್‌ಲೋಡ್ ಮಾಡುವ ಸಂಚಾರ ನಿಯಂತ್ರಣ ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ಸವಾರರು ಕಿಡಿಕಾರಿದ್ದಾರೆ.


Share News