ದೊಡ್ಡಬಳ್ಳಾಪುರ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಟೊಮೆಟೊ ದರ ತೀವ್ರವಾಗಿ ಕುಸಿದಿರುವುದು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರನ್ನು ಕಂಗಾಲಾಗಿಸಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಫಸಲಿಗೆ ತಕ್ಕ ಬೆಲೆ ಸಿಗದೆ, ಅನ್ನದಾತರು ತೀವ್ರ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಎದ್ದಲಹಳ್ಳಿ ಸಮೀಪದ ರೈತ ರಮೇಶ್ ಅವರು ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಕೃಷಿಗಾಗಿ ಸಾಲ ಮಾಡಿ ಸುಮಾರು ₹1 ಲಕ್ಷ ಖರ್ಚು ಮಾಡಿದ್ದು, ಬೆಳೆ ಉತ್ತಮ ಆದಾಯ ತಂದುಕೊಡಬಹುದು ಎಂಬ ಅವರ ನಿರೀಕ್ಷೆಗೆ ಮಾರುಕಟ್ಟೆಯ ಬೆಲೆ ಕುಸಿತ ತಣ್ಣೀರೆರಚಿದೆ.
ಕೈಗೆ ಸಿಗದ ಉತ್ಪಾದನಾ ವೆಚ್ಚ:
ಪ್ರಸ್ತುತ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ಗೆ ಕೇವಲ ₹150ರಿಂದ ₹170ರವರೆಗೆ ಮಾತ್ರ ದರ ದೊರೆಯುತ್ತಿದೆ. ಅಂದರೆ ಕೆಜಿಗೆ ಕೇವಲ ₹10ರಿಂದ ₹11.33 ಸಿಗುತ್ತಿದ್ದು, ಬಿತ್ತನೆ, ಗೊಬ್ಬರ, ಔಷಧ, ನೀರಾವರಿ ಹಾಗೂ ಕೂಲಿ ಕಾರ್ಮಿಕರ ವೆಚ್ಚವನ್ನು ಪರಿಗಣಿಸಿದರೆ ಮಾಡಿದ ಖರ್ಚನ್ನಾದರೂ ಮರಳಿ ಪಡೆಯುವುದು ಅಸಾಧ್ಯವಾಗಿದೆ. ಕೊಯ್ಲು ಮತ್ತು ಸಾಗಣೆ ವೆಚ್ಚವಂತೂ ರೈತನ ಜೇಬಿಗೆ ಕತ್ತತ್ರಿ ಕತ್ತರಿಸಿದಂತಾಗಿದೆ.
ಮಳೆ ಕೊರತೆಯ ಬವಣೆ:
ಸಮರ್ಪಕ ಮಳೆಯಾಗಿದ್ದರೆ ಇದೇ ಟೊಮೆಟೊಗೆ 15 ಕೆಜಿ ಬಾಕ್ಸ್ಗೆ ₹650ರಿಂದ ₹700ರವರೆಗೆ ಉತ್ತಮ ದರ ಸಿಗುವ ನಿರೀಕ್ಷೆಯಿತ್ತು ಎಂದು ರೈತ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಮಳೆ ಕೈಕೊಟ್ಟಿರುವುದು ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದು ರೈತರ ಆದಾಯದ ಮೇರೆಗೆ ದೊಡ್ಡ ಹೊಡೆತ ನೀಡಿದೆ.
ಸಾಲ ತೀರಿಸುವುದೇ ದೊಡ್ಡ ಚಿಂತೆ:
ಬೇಗನೆ ಹಾಳಾಗುವ ತರಕಾರಿಯಾಗಿರುವುದರಿಂದ ಟೊಮೆಟೊವನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಶಾಪ ರೈತರನ್ನು ಕಾಡುತ್ತಿದೆ. ಫಸಲು ಮಾರಿ ಸಾಲ ತೀರಿಸೋಣ ಎಂದಿದ್ದ ರೈತರಿಗೆ ಈಗ ಸಾಲ ಮರುಪಾವತಿಯೇ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ.
ರೈತರ ಅಳಲು:
”ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯಲು ಸಾಲ ಮಾಡಿ ಸುಮಾರು ₹1 ಲಕ್ಷ ಖರ್ಚು ಮಾಡಿದ್ದೇನೆ. ಆದರೆ ಈಗ ಬಾಕ್ಸ್ಗೆ ₹150ರಿಂದ ₹170 ಮಾತ್ರ ಸಿಗುತ್ತಿದೆ. ಇಷ್ಟೊಂದು ಕಡಿಮೆ ದರಕ್ಕೆ ಮಾರಾಟ ಮಾಡಿದರೆ ಮಾಡಿದ ಖರ್ಚು ಹೇಗೆ ವಾಪಸ್ ಬರುತ್ತದೆ? ನಮಗೆ ಭಾರೀ ನಷ್ಟವಾಗುತ್ತಿದೆ” ಎಂದು ರೈತ ರಮೇಶ್ ಅಳಲು ತೋಡಿಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರದಿಂದ ಸೂಕ್ತ ನೆರವು ಒದಗಿಸಬೇಕು ಎಂಬುದು ಈ ಭಾಗದ ರೈತರ ಕಳಕಳಿಯ ಆಶಯವಾಗಿದೆ.
Arakshakara Times Media
Related posts
