ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದ ಸಮಯವನ್ನು ಕಾದು ಮನೆಗೆ ನುಗ್ಗಿ ಬರೋಬ್ಬರಿ 130 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯೊಬ್ಬ, ಮನೆ ಮಾಲೀಕನ ಸಮಯಪ್ರಜ್ಞೆ ಹಾಗೂ ಜಾಣ್ಮೆಯಿಂದಾಗಿ ಕೈಕಾಲು ಕಟ್ಟಿಹಾಕಿದಂತೆ ಸಿಕ್ಕಿಬಿದ್ದ ರೋಚಕ ಘಟನೆ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಈ ಕಳ್ಳತನ ಯತ್ನ ನಡೆದಿದೆ. ಕೃಷ್ಣಪ್ಪ ಅವರ ಕುಟುಂಬದವರು ಸಿನಿಮಾ ನೋಡಲು ಹೋಗಿರುವುದನ್ನು ಗಮನಿಸಿದ ಆರೋಪಿ, ಖಾಲಿ ಮನೆಗೆ ನುಗ್ಗಿ 130 ಗ್ರಾಂ ಚಿನ್ನವನ್ನು ದೋಚಿದ್ದಾನೆ. ಆದರೆ ಕೃತ್ಯದ ಬಳಿಕ ಮನೆಯಿಂದ ಹೊರಬರಲು ಸಾಧ್ಯವಾಗದೆ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗುವಂತೆ ಮಾಡಿಕೊಂಡಿದ್ದಾನೆ.
ಮನೆ ಮಾಲೀಕರ ಸಮಯಪ್ರಜ್ಞೆ:
ಸಿನಿಮಾ ಮುಗಿಸಿ ವಾಪಸ್ ಬಂದ ಕೃಷ್ಣಪ್ಪ ಅವರಿಗೆ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಅನುಮಾನ ಮೂಡಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಒಳಗೆ ಕಳ್ಳತನ ನಡೆದಿರುವುದು ಸ್ಪಷ್ಟವಾಗಿದೆ. ಕೂಡಲೇ ಕುಟುಂಬಸ್ಥರು ಹಾಗೂ ಸ್ಥಳೀಯರ ಸಹಾಯದಿಂದ ಮನೆಯೊಳಗೆ ಕೂಲಂಕಷವಾಗಿ ಹುಡುಕಾಟ ನಡೆಸಿದಾಗ, ಆರೋಪಿಯು ಹೆಡಬ್ಳಾಗಿ ಮಂಚದ ಕೆಳಗೆ ಅವಿತುಕೊಂಡಿರುವುದು ಪತ್ತೆಯಾಗಿದೆ. ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಓಲಾ ಕ್ಯಾಬ್ ಚಾಲಕನೇ ಆರೋಪಿ:
ಸಿಕ್ಕಿಬಿದ್ದ ಆರೋಪಿಯನ್ನು ಕೇರಳದ ಚಿತ್ತಿಲಪಲ್ಲಿ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಈತ ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದು, ಓಲಾ ಮತ್ತು ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕಳ್ಳತನಕ್ಕೂ ಮುನ್ನ ಆರೋಪಿಯು ಕಳೆದ ಎರಡು-ಮೂರು ದಿನಗಳಿಂದ ಕೃಷ್ಣಪ್ಪ ಅವರ ಮನೆಯವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎಂಬುದು ಗೊತ್ತಾಗಿದೆ. ಸದ್ಯ ಈ ಸಂಬಂಧ ವಿಜಯಪುರ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
Arakshakara Times Media
Related posts
