ಬೆಳಗಾವಿ: ಹಗಲು ವೇಳೆಯಲ್ಲಿ ಸ್ಕೂಟಿಯಲ್ಲಿ ತಿರುಗಾಡಿ ಬೀಗ ಹಾಕಿದ್ದ ಮನೆಗಳನ್ನು ಗುರಿಯಾಗಿಸಿ ಸರಣಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬರೋಬ್ಬರಿ ₹26,53,400/- ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ:
ಅಕ್ಟೋಬರ್ 02, 2026ರಂದು ಸ್ವಾಮಿ ವಿವೇಕಾನಂದ ನಗರ, ಹುಂಚ್ಯಾನಟ್ಟಿ ನಿವಾಸಿ ಶ್ರೀಮತಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಎಂಬುವವರ ಮನೆಯಲ್ಲಿ ಯಾರೋ ಕಳ್ಳರು ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ 218/2026, ಕಲಂ 331(3), 305(ಎ) ಬಿಎನ್ಎಸ್) ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ಹಗಲಲ್ಲೇ ಸ್ಕೂಟಿಯಲ್ಲಿ ತಿರುಗಿ ಕೃತ್ಯ:
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪಿಐ ಶ್ರೀ ನಾಗನಗೌಡ ಕಟ್ಟಿಮನಿಗೌಡ ಹಾಗೂ ಪಿಎಸ್ಐ ಶ್ರೀ ಸಂತೋಷ ದಳವಾಯಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಕ್ರಾಂತಿನಗರ, ಗಣೇಶಪುರ ನಿವಾಸಿ (ಹಾಲಿ ತಿಲಕವಾಡಿ ಶ್ರೀಹರಿ ಅಪಾರ್ಟ್ಮೆಂಟ್) ರೋಹನ್ ರೂಪೇಶ ಪಾಟೀಲ (30) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ಹಗಲು ವೇಳೆಯಲ್ಲಿ ಸ್ಕೂಟಿ ಮೋಟಾರ್ ಸೈಕಲ್ ಮೇಲಿಂದ ತಿರುಗಾಡಿ ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಚ್ಚೆ ಗ್ರಾಮಗಳ ಒಟ್ಟು 6 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಾಯಬಿಟ್ಟಿದ್ದಾನೆ.
ವಶಪಡಿಸಿಕೊಂಡ ಸೊತ್ತುಗಳ ವಿವರ:
ಆರೋಪಿಯಿಂದ ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ವಸ್ತುಗಳನ್ನು ಜಪ್ತು ಮಾಡಲಾಗಿದೆ:
ರೂ. 23,88,400/- ಮೌಲ್ಯದ 161 ಗ್ರಾಂ ಬಂಗಾರದ ಆಭರಣಗಳು.
ರೂ. 2,30,000/- ಮೌಲ್ಯದ 1 ಕೆ.ಜಿ. ಬೆಳ್ಳಿಯ ವಸ್ತುಗಳು.
ಕೃತ್ಯಕ್ಕೆ ಬಳಸಿದ ಸ್ಕೂಟಿ ಮೋಟಾರ್ ಸೈಕಲ್ (ಸಂಖ್ಯೆ: ಕೆಎ-22/ಇಯು-2160, ಅಂದಾಜು ರೂ. 35,000/-).
ಕಬ್ಬಿಣದ ಉಳಿ, ಕಟರ್, ಸ್ಕ್ರೂ-ಡ್ರೈವರ್ ಹಾಗೂ ಪಾನಾಗಳು.
ಒಟ್ಟಾರೆಯಾಗಿ ರೂ. 26,53,400/- ಮೌಲ್ಯದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಕುಖ್ಯಾತ ಕಳ್ಳನನ್ನು ಪತ್ತೆಹಚ್ಚಿ, ಕಳುವಾದ ಅಮೂಲ್ಯ ಮಾಲನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಿಐ ನಾಗನಗೌಡ ಕಟ್ಟಿಮನಿಗೌಡ, ಪಿಎಸ್ಐಗಳಾದ ಸಂತೋಷ ದಳವಾಯಿ, ಲಕ್ಷ್ಮಪ್ಪ ಜೋಡಟ್ಟಿ, ವೈ.ಡಿ. ಸರನಾಯ್ಕ ಹಾಗೂ ಸಿಬ್ಬಂದಿಗಳಾದ ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ, ಮಾರುತಿ ಕೋಟಬಾಗಿ, ಬಾಳೇಶ ಪಡನಾಡ, ಆನಂದ ಕೋಟಗಿ, ಶಿವಾನಂದ ವರ್ಚಗಲ್ಲ ಹಾಗೂ ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಶಿದ, ದೀಪಕ ದೊಡ್ಡಗೋಣಿ ಅವರ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರುಗಳು ವಿಶೇಷವಾಗಿ ಶ್ಲಾಘಿಸಿದ್ದಾರೆ.
Arakshakara Times Media
Related posts
