ಗುಂಡ್ಲುಪೇಟೆ/ಬಂಡೀಪುರ: ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕೆಪುರ ಗ್ರಾಮದ ಸರ್ವೇ ನಂ. 116ರ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರಿ ಪ್ರಮಾಣದ ವನ್ಯಜೀವಿ ದೇಹದ ಭಾಗಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 18, 2026ರಂದು ಕುಂದುಕೆರೆ ಹಾಗೂ ಜಿ.ಎಸ್. ಬೆಟ್ಟ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಮೀನಿನಲ್ಲಿದ್ದ ಮನೆ ಹಾಗೂ ಶೆಡ್ ಪರಿಶೀಲಿಸಿದಾಗ ಅಕ್ರಮ ಕೃತ್ಯ ಬಯಲಾಗಿದೆ.
ವಶಪಡಿಸಿಕೊಂಡ ವಸ್ತುಗಳ ವಿವರ:
ವನ್ಯಜೀವಿ ಅವಶೇಷಗಳು: 48 ಜಿಂಕೆ/ಸಾರಂಗದ ಕೊಂಬುಗಳು, 2 ಕೊಂಬುಗಳಿರುವ 1 ಜಿಂಕೆ ತಲೆಬುರುಡೆ, 2 ಪ್ರಾಣಿ ಚರ್ಮದ ಹೊದಿಕೆಗಳು ಹಾಗೂ ನವಿಲು ಗರಿಗಳು.
ಆಯುಧಗಳು ಮತ್ತು ಸಲಕರಣೆಗಳು: 1 ಹಳೆಯ ರಿವಾಲ್ವರ್, 3 ಸ್ಪೋರ್ಟ್ಸ್ ಗನ್‌ಗಳು, 1 ರೈಫಲ್, ಮದ್ದುಗುಂಡುಗಳು, ಪ್ರಾಣಿ ಸೆರೆಹಿಡಿಯುವ ಬೇಡ್ ತಂತಿಗಳು ಹಾಗೂ 2 ಐ.ಆರ್ (IR) ಕ್ಯಾಮೆರಾಗಳು.
ಒಬ್ಬನ ಬಂಧನ; ನಿವೃತ್ತ ಸೇನಾಧಿಕಾರಿ ಸೇರಿ ಮೂವರ ವಿರುದ್ಧ ಪ್ರಕರಣ:
ಘಟನಾ ಸ್ಥಳದಲ್ಲಿದ್ದ ಸುರೇಶ್ ಪರಿಯಾರ್ (ಬಿನ್ ಡಾಲ್ ಬಿ ಪರಿಯಾರ್) ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ, ಈ ಜಮೀನು ‘ಸೆನೆಟಲಾ ಲಾಂಗ್ ಕುಮೆರ’ ಎಂಬುವವರ ಹೆಸರಿನಲ್ಲಿದ್ದು, ಅಲ್ಲಿ ಸಿಕ್ಕಿರುವ ಆಯುಧ ಹಾಗೂ ವಸ್ತುಗಳು ಬೆಂಗಳೂರಿನ ಸಿ.ವಿ. ರಾಮನ್ ನಗರದ ನಿವಾಸಿ ‘ಕರ್ನಲ್ ಜಾಕೋಬ್’ ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಮೂವರ ವಿರುದ್ಧ ಕುಂದುಕೆರೆ ವಲಯದ ಪಿ.ಕೆ. ನಿಸಾರ್ ಅಹಮದ್ ಮೊಕದ್ದಮೆ ದಾಖಲಿಸಿದ್ದಾರೆ. ಬಂಧಿತ ಸುರೇಶ್ ಪರಿಯಾರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಭಾರ ನಿರ್ದೇಶಕ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವರ್ (ಐ.ಎಫ್.ಎಸ್) ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿಗಳಾದ ಪಿ.ಕೆ. ನಿಸಾರ್ ಅಹಮದ್, ಕೆ.ಪಿ. ಸತೀಶ್ ಕುಮಾರ್ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳ (STPF) ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಗೆ ನಿಖರ ಮಾಹಿತಿ ನೀಡಿ ಸಹಕರಿಸಿದ ಗ್ರಾಮಸ್ಥರ ಸಮಯಪ್ರಜ್ಞೆಯನ್ನು ಅರಣ್ಯ ಇಲಾಖೆ ಶ್ಲಾಘಿಸಿದೆ.
ವರದಿ :- ಗಿಲ್ಬರ್ಟ್. ಜೆ