ಹಾಸನ (ಬೇಲೂರು): ತಾಲೂಕಿನ ಬಿಕ್ಕೊಡು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯುವ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ದಸರಾ ಹಾಗೂ ಪಳಗಿದ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾಡಾನೆಗಳ ಹಾವಳಿಯಿಂದ ತಂಪುಬಿದ್ದಿರುವ ಗ್ರಾಮಸ್ಥರಿಗೆ ನೆಮ್ಮದಿ ತರಲು ಅರಣ್ಯ ಇಲಾಖೆ ಈ ಕಾರ್ಯಾಚರಣೆ ರೂಪಿಸಿದ್ದು, ‘ಕ್ಯಾಪ್ಟನ್ ಪ್ರಶಾಂತ್’ ನೇತೃತ್ವದ ಸಾಕಾನೆಗಳ ತಂಡ ರಂಗಕ್ಕಿಳಿದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಆನೆಗಳು:
ಕ್ಯಾಪ್ಟನ್ ಪ್ರಶಾಂತ್ ನೇತೃತ್ವದ ಈ ವಿಶೇಷ ಪಡೆಯ ಜೊತೆಗೆ ಧನಂಜಯ, ಲಕ್ಷ್ಮಣ, ಈಶ್ವರ, ಅಜ್ಜಯ್ಯ ಹಾಗೂ ಏಕಲವ್ಯ ಆನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ಕಾರ್ಯಾಚರಣೆ ಆರಂಭಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಶುಭ ಕೋರಿದರು. ಈ ಸಂದರ್ಭದಲ್ಲಿ ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸೌರಭ್ ಕುಮಾರ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.