Share News

ಆನೇಕಲ್ (ಬೆಂಗಳೂರು): ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ ಜನರ ನಿದ್ದೆಗೆಡಿಸಿದ್ದ ಅಪಾಯಕಾರಿ ‘ಚಡ್ಡಿ ಗ್ಯಾಂಗ್’ ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಕಾಲಿಟ್ಟಿದೆ. ಆನೇಕಲ್ ತಾಲೂಕಿನ ಲೇಔಟ್ ಒಂದರಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿದ ಸಿಸಿಟಿವಿ (CCTV) ದೃಶ್ಯಗಳು ಲಭ್ಯವಾಗಿವೆ.

​ಲೇಔಟ್‌ನಲ್ಲಿ ದರೋಡೆಗೆ ಸಂಚು:

ಆನೇಕಲ್ ತಾಲೂಕಿನ ಕುಂಬಾರನಹಳ್ಳಿ ಬಳಿಯಿರುವ ‘ಸೆಲಬ್ರಿಟಿ ಎಕೋ ಫ್ರಂಟ್’ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಒಳಉಡುಪು (ಚಡ್ಡಿ) ಧರಿಸಿ, ಮುಖಕ್ಕೆ ಬಟ್ಟೆ ಕಟ್ಟುಕೊಂಡು ಬಂದಿದ್ದ ನಾಲ್ವರು ದರೋಡೆಕೋರರ ತಂಡ ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಹಾಗೂ ರಾಮರೆಡ್ಡಿ ಎಂಬುವವರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಸಂಚು ರೂಪಿಸಿತ್ತು.

​ಮಹಿಳೆಯ ಜಾಗರೂಕತೆಯಿಂದ ತಪ್ಪಿದ ಭಾರಿ ದುರಂತ:

ನಾಲ್ವರ ಪೈಕಿ ಇಬ್ಬರು ಕದೀಮರು ರಸ್ತೆಯಲ್ಲಿ ಕಾವಲು ನಿಂತಿದ್ದರೆ, ಇನ್ನುಳಿದಿಬ್ಬರು ಕಾಂಪೌಂಡ್ ಏರಿ ಒಳನುಗ್ಗಿದ್ದರು. ಕಾಂಪೌಂಡ್ ಗೇಟ್ ಕಟ್ ಮಾಡುವಾಗ ಉಂಟಾದ ಶಬ್ದವನ್ನು ಕೇಳಿಸಿಕೊಂಡ ಲೇಔಟ್‌ನ ಮಹಿಳೆಯೊಬ್ಬರು ಕಿಟಕಿಯಿಂದ ಹೊರಗೆ ವೀಕ್ಷಿಸಿದ್ದಾರೆ. ಈ ವೇಳೆ ಕದೀಮರ ಭಯಾನಕ ಚಲನವಲನ ಕಂಡು ತಕ್ಷಣವೇ ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಚೀರಾಟದಿಂದ ಬೆಚ್ಚಿಬಿದ್ದ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

​ಜೀವ ತೆಗೆಯಲು ಹಿಂಜರಿಯದ ದರೋಡೆಕೋರರು!

ಈ ಚಡ್ಡಿ ಗ್ಯಾಂಗ್ ಸಾಮಾನ್ಯ ಕಳ್ಳರಲ್ಲ. ಧಾರವಾಡ, ಹುಬ್ಬಳ್ಳಿ, ಹಾಸನ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಬಾಗಿಲು ಒಡೆದು ದರೋಡೆ ನಡೆಸಿರುವ ಇವರು, ಕಳ್ಳತನದ ವೇಳೆ ಯಾರಾದರೂ ಎದುರಾದರೆ ಅಥವಾ ಅಡ್ಡ ಬಂದರೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಸಹ ಹಿಂಜರಿಯುವುದಿಲ್ಲ. ಸಾರ್ವಜನಿಕರ ಜೀವಕ್ಕೇ ಅಪಾಯ ತಂದೊಡ್ಡುವ ಈ ಗ್ಯಾಂಗ್ ಎಂಟ್ರಿಯಿಂದಾಗಿ ಆನೇಕಲ್ ಹಾಗೂ ಜಿಗಣಿ ಭಾಗದ ಜನರಲ್ಲಿ ತೀವ್ರ ಆತಂಕ ಆವರಿಸಿದೆ.

​ಘಟನೆ ಕುರಿತು ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಷಯ ಬೆಳಕಿಗೆ ಬಂದಿದ್ದು, ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾತ್ರಿ ವೇಳೆ ಸಾರ್ವಜನಿಕರು ತೀವ್ರ ಜಾಗರೂಕರಾಗಿರುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.


Share News